ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತಜ್ಞರ ಮೌಲ್ಯಮಾಪನ ಸಮಿತಿಗೆ ಗೌತಮ್ ಅದಾನಿ ಕಂಪನಿಯ ಉದ್ಯೋಗಿಯೋರ್ವರನ್ನು ನೇಮಕ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿಪಕ್ಷಗಳು ಟೀಕೆ ಮಾಡಿದೆ.
ತಜ್ಞರ ಮೌಲ್ಯಮಾಪನ ಸಮಿತಿಗೆ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಕಂಪನಿಯ ಉದ್ಯೋಗಿ ಜನಾರ್ದನ ಚೌಧರಿ ಎಂಬುವವರನ್ನು ನೇಮಕ ಮಾಡಲಾಗಿದ್ದು, ‘ಅದಾನಿ-ಪ್ರಧಾನಿಯ ದೋಸ್ತಿ ಎಂದರೆ ಹೀಗಿರಬೇಕು’ ಎನ್ನುವ ಮೂಲಕ ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ.
ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಕೇರಳ ಕಾಂಗ್ರೆಸ್ ಘಟಕ, ‘ಅದಾನಿಯ ಪ್ರಧಾನ ಸೇವಕ, ಅದಾನಿಯ ಉದ್ಯೋಗಿ ಜನಾರ್ದನ ಚೌಧರಿ ಅವರನ್ನು ಪರಿಸರ ಸಚಿವಾಲಯದ ತಜ್ಞರ ಮೌಲ್ಯಮಾಪನ ಸಮಿತಿಗೆ ನೇಮಕ ಮಾಡಿದ್ದಾರೆ. ಈ ಸಮಿತಿಯು ಅದಾನಿಯ 6 ಯೋಜನೆಗಳಿಗೆ ಅಂದರೆ 10,300 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗೆ ಅನುಮೋದನೆ ನೀಡಲಿದೆ’ ಎಂದು ಕೇಂದ್ರದ ನಡೆಯನ್ನು ಟೀಕಿಸಿದೆ.
Adani Pradhan Sevak appointed Adani employee Janardhan Choudhury as a member of EAC under Environment Ministry. This committee has to approve 6 Adani projects (10,300 MW).
Recently Adani’s 1500 MW Satara plant was approved by him. Eej of doing bujiness!https://t.co/m5srLcaNgl
— Congress Kerala (@INCKerala) November 14, 2023
ಇತ್ತೀಚೆಗೆ ಮಹಾರಾಷ್ಟ್ರದ ಸತಾರದಲ್ಲಿ 1500 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಕ್ಕೆ ಇವರೇ ಒಪ್ಪಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದು, ಇದು ವ್ಯಾಪಾರವನ್ನು ಸುಲಭಗೊಳಿಸುವ ವಿಧಾನ ಎಂದು ವ್ಯಂಗ್ಯವಾಡಿದೆ.
ಶಿವಸೇನಾ (ಯಟಿಬಿ) ಹಾಗೂ ತೃಣಮೂಲ ಕಾಂಗ್ರೆಸ್ ಕೂಡ ಸರ್ಕಾರದ ಈ ನಡೆಯನ್ನು ಟೀಕಿಸಿದೆ. ‘ದೋಸ್ತಿ ಎಂದರೆ ಹೀಗಿರಬೇಕು’ ಎಂದು ಶಿವಸೇನಾದ ರಾಜ್ಯಸಭೆ ಸದಸ್ಯೆ ಪ್ರಿಯಾಂಕ ಚತುರ್ವೇದಿ ಕೇಂದ್ರದ ನಡೆಯನ್ನು ವ್ಯಂಗ್ಯವಾಡಿದ್ದಾರೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಸಲಹೆಗಾರರಾಗಿರುವ ಚೌಧರಿಯವರನ್ನು ಅದಾನಿ ಸಮೂಹದ ಜಲವಿದ್ಯುತ್ ಯೋಜನೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಿರುವ ಪರಿಸರ ಸಚಿವಾಲಯದ ಮೌಲ್ಯಮಾಪನ ಸಮಿತಿಗೆ ಕಳೆದ ಸೆ. 27ರಂದು ನೇಮಕ ಮಾಡಲಾಗಿತ್ತು. ಸರ್ಕಾರ ಒಪ್ಪಿಗೆ ನೀಡುವುದಕ್ಕೂ ಮುನ್ನ ಈ ಮೌಲ್ಯಮಾಪನ ಸಮಿತಿಯು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ.