ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ (75) ಮಂಗಳವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ.
ಭಾನುವಾರ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮಂಗಳವಾರ ರಾತ್ರಿ 10:30ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು ಎಂದು ಸಹಾರಾ ಗ್ರೂಪ್ ಪ್ರಕಟಿಸಿದೆ.
ಅವರು ದೀರ್ಘಕಾಲದಿಂದ ಮೆಟಾಸ್ಟಾಟಿಕ್ ಕ್ಯಾನ್ಸರ್, ಅಧಿಕ ಬಿಪಿ ಮತ್ತು ಮಧುಮೇಹದಿಂದ ಬಳಲುತ್ತಿದ್ದರು ಎಂದು ಕಂಪನಿ ತಿಳಿಸಿದೆ.
ಸುಬ್ರತಾ ರಾಯ್ ಅವರ ಜೀವನ
ಸುಬ್ರತಾ ರಾಯ್ ಅವರು ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದರು. ಗೋರಖ್‌ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. 1976 ರಲ್ಲಿ, ರಾಯ್ ಅವರು ಆರ್ಥಿಕ ಒತ್ತಡದಲ್ಲಿದ್ದ ಸಹಾರಾ ಫೈನಾನ್ಸ್ ಎಂಬ ಚಿಟ್ ಫಂಡ್ ಕಂಪನಿಯನ್ನು ಖರೀದಿಸಿದರು.
1978ರ ಹೊತ್ತಿಗೆ ಅದು ಸಹಾರಾ ಇಂಡಿಯಾ ಪರಿವಾರ್ ಆಗಿ ಸುಧಾರಣೆಯಾಯಿತು. ಅದರ ನಂತರ ಅವರು ವ್ಯವಹಾರವನ್ನು ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಹೀಗೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದರು. 1992 ರಲ್ಲಿ ರಾಷ್ಟ್ರೀಯ ಸಹಾರಾ ಮತ್ತು ಸಹಾರಾ ಟಿವಿ ಚಾನೆಲ್ ಎಂಬ ಮಾಧ್ಯಮಗಳನ್ನು ಪ್ರಾರಂಭಿಸಿದರು. ಕೆಲವು ವರ್ಷಗಳಿಂದ ಸಹಾರಾ ಟಿವಿಯನ್ನು ಸಹಾರಾ ಒನ್ ಎಂದು ಬದಲಾಯಿಸಲಾಯಿತು.
2010ರಲ್ಲಿ ರಾಯ್ ಲಂಡನ್‌ನ ಗ್ರೋಸ್ವೆನರ್ ಹೌಸ್ ಹೋಟೆಲ್ ಮತ್ತು 2012 ರಲ್ಲಿ ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್ ಅನ್ನು ಖರೀದಿಸಿದರು. 2000ರ ದಶಕದಲ್ಲಿ ಸಹಾರಾ ಇಂಡಿಯಾ ಪರಿವಾರ್ 1.2 ಮಿಲಿಯನ್ ಉದ್ಯೋಗಿಗಳನ್ನು ಹೊಂದಿತ್ತು. ಸಹಾರಾ ಗ್ರೂಪ್ ದೇಶದಲ್ಲಿ ರೈಲ್ವೆ ನಂತರ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿ ಎಂದು ಗುರುತಿಸಲ್ಪಟ್ಟಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರತಿ ಮನೆಯ ಕಸ ಸಂಗ್ರಹಣೆಗೆ ತಿಂಗಳಿಗೆ ₹30 ನಿಗದಿ; ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ
ಸಹಾರಾ ಗ್ರೂಪ್ 2014 ರಿಂದ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಹಿಂದಿರುಗಿಸಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಸುಬ್ರತಾ ರಾಯ್ ಅವರು ಹಲವು ವರ್ಷ ಜೈಲಿನಲ್ಲಿದ್ದರು. ಸದ್ಯ ಅವರು ಪೆರೋಲ್‌ನಲ್ಲಿದ್ದರು ಎಂದು ಸಹಾರಾ ಗ್ರೂಪ್ ಪ್ರಕಟಿಸಿದೆ.
ಸುಬ್ರತಾ ರಾಯ್ ಅವರ ಪರಂಪರೆ ಹಾಗೂ ಉದ್ಯಮದಲ್ಲಿ ಹೊಂದಿದ್ದ ಅವರ ದೃಷ್ಟಿಕೋನವನ್ನು ಮುಂದುವರೆಸಿಕೊಂಡು ಹೋಗಲಾಗವುದು ಎಂದು ಸಹಾರಾ ಗ್ರೂಪ್ ತಿಳಿಸಿದೆ.
ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ಅವರಿಗೆ ಪತ್ನಿ ಸ್ವಪ್ನಾ ರಾಯ್ ಮತ್ತು ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಎಂಬಿಬ್ಬರು ಪುತ್ರರಿದ್ದಾರೆ.