ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆ ಕಟ್ಟಿಸಿಕೊಡುವುದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸ್ಲಮ್ ನಿವಾಸಿಗಳಿಂದ 25ಸಾವಿರ ರೂ. ಹಣ ಪಡೆದು ವಂಚನೆ ಮಾಡಿದ್ದಾರೆಂದು ಮಂಡಳಿ ವಿರುದ್ಧ ಆರೋಪ ಕೇಳಿಬಂದಿದೆ. ಚಿಕ್ಕೂಡಿಯ ಸ್ಲಮ್ ನಿವಾಸಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಚಿಕ್ಕೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಸ್ಲಮ್ ನಿವಾಸಿಗಳಿಗೆ ಮನೆಗಳು ಮಂಜೂರಾಗಿದ್ದವು. ಇದಕ್ಕಾಗಿ 25ಸಾವಿರ ರೂ. ಹಣ ಪಾವತಿಸಿಕೊಂಡಿದ್ದ ಸ್ಲಮ್ ಬೋರ್ಡ್ ಅಧಿಕಾರಿಗಳು ಮನೆ ಕಟ್ಟಿಸಿಕೊಡದೇ ಮೋಸ ಮಾಡಿದ್ದಾರೆ. ಸ್ಲಮ್ ಬೋರ್ಡ್ನಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇನ್ನು ಕೆಲವು ಮನೆಗಳನ್ನು ಅರ್ಧ ಮಾಡಿ ಬಿಟ್ಟ ಆರೋಪ ಸಹ ಕೇಳಿ ಬಂದಿದೆ. ಚಿಕ್ಕೋಡಿಯ ಮಾತಂಗಿಕೇರಿಯಲ್ಲಿ 50ಕ್ಕೂ ಹೆಚ್ಚು ಫಲಾನುಭವಿಗಳು ಮನೆ ಕಟ್ಟಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
2019ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ 07ಸ್ಲಮ್‌ಗಳಲ್ಲಿ 449ಫಲಾನುಭವಿಗಳ ಗುರುತಿಸಿ ಮನೆ ಕಟ್ಟಿಸಿಕೊಡಲು ಯೋಜನೆ ರೂಪಿಸಲಾಗಿತ್ತು. ಯೋಜನೆಯ ನಿಯಮದಂತೆ ಪ್ರಾರಂಭದ ಹಂತದಲ್ಲಿನ ಫಲಾನುಭವಿಗಳಿಗೆ 25ಸಾವಿರ ರೂ. ಡಿಡಿ ಕಟ್ಟಲು ಸೂಚಿಸಲಾಗಿತ್ತಂತೆ. ತಮಗೂ ಒಂದು ಸೂರು ಆಗುತ್ತೆ ಎಂಬ ಆಸೆಯಲ್ಲಿ ಚಿಕ್ಕೋಡಿ ನಗರದ ಮಾತಂಗಿಕೇರಿಯ ನಿವಾಸಿಗಳು ಸಾಲ ಸೋಲ ಮಾಡಿ 25ಸಾವಿರ ರೂ. ಹಣ ಪಾವತಿಸಿದ್ದರು. ಆದರೆ, 2019ರಲ್ಲಿ ಹಣ ಪಾವತಿಸಿದರೂ ಈವರೆಗೂ ಮನೆ ಕಟ್ಟಿಕೊಟ್ಟಿಲ್ಲ.
ತಾವೆಲ್ಲ ಬಡ ಕೂಲಿ ಕಾರ್ಮಿಕರು, ಸಾಲ ಸೋಲ ಮಾಡಿ 25ಸಾವಿರ ರೂ. ಪಾವತಿ ಮಾಡಿದ್ದೇವೆ. ಆದರೆ, ನಾಲ್ಕು ವರ್ಷ ಕಳೆದರೂ ಮನೆ ನಿರ್ಮಾಣ ಮಾಡಿಕೊಡುತ್ತಿಲ್ಲ. ಮಾತಂಗಿ ಕೇರಿ ಸೇರಿದಂತೆ ಒಟ್ಟು ಏಳು ಸ್ಲಮ್‌ಗಳಿವೆ. ಈ ಎಲ್ಲಾ ಪ್ರದೇಶಗಳಲ್ಲಿಯೂ ಫಲಾನುಭವಿಗಳು ಇದ್ದು ಬಹುತೇಕ ಮನೆಗಳು ಪೂರ್ಣಗೊಳ್ಳದೇ ಇದ್ದರೂ ಪೂರ್ಣಗೊಂಡಿವೆ ಎಂದು ದಾಖಲೆ ಸಲ್ಲಿಸಲಾಗಿದೆ. ಎಂದು ಬೆಳಗಾವಿಯ ಸ್ಲಂ ಬೋರ್ಡ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಆರ್ಟಿಐ ಕಾರ್ಯಕರ್ತ ಮತ್ತು ಮಾತಂಗಿಕೇರಿಯ ನಿವಾಸಿಯೂ ಆಗಿರುವ ಅನಿಲ್ ಧಾವಣೆ ಆರ್ ಟಿಐನಡಿ ಮಾಹಿತಿ ಕೇಳಿದಾಗ 188 ಮನೆಗಳು ಪೂರ್ಣಗೊಂಡಿವೆ ಎಂಬ ದಾಖಲಾತಿ ನೀಡಿದ್ದಾರೆ. ಆದರೆ, ಮಾತಂಗಿಕೇರಿ ಸ್ಲಮ್ ಒಂದರಲ್ಲೇ 10ಕ್ಕೂ ಹೆಚ್ಚು ಮನೆಗಳು ಇನ್ನೂ ಪೂರ್ಣಗೊಂಡಿಲ್ಲ. ಪೂರ್ಣಗೊಂಡಿದೆ ಎಂದು ದಾಖಲೆ ನೀಡಿದ್ದಾರೆ ಎಂದು ಅನಿಲ್ ಧಾವಣೆ ಆರೋಪಿಸಿದ್ದಾರೆ.