ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವ ತೆರೆ ಕಂಡಿದೆ. ಬುಧವಾರ ಮಧ್ಯಾಹ್ನ 12.23ಕ್ಕೆ ಹಾಸನ ಜಿಲ್ಲಾಡಳಿತದ ಸಮ್ಮುಖದಲ್ಲಿ ಬಾಗಿಲು ಮುಚ್ಚುವ ಮೂಲಕ ಉತ್ಸವವು ಕೊನೆಗೊಂಡಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ, ಸಹಕಾರ ಸಚಿವ ಕೆ ಎನ್ ರಾಜಣ್ಣ, ಶಾಸಕ ಹೆಚ್ ಪಿ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸತ್ಯಭಾಮ, ಎಸ್‌ಪಿ ಮಹಮದ್ ಸುಜೀತಾ ಅವರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಬಂದ್ ಮಾಡಿದ್ದಾರೆ.
ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ ಪೂಜೆ ಸಲ್ಲಿಸಿ, ಗರ್ಭಗುಡಿಯಿಂದ ಅರ್ಚಕರು, ಅಧಿಕಾರಿಗಳು ಹೊರಬಂದು ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿ ಬೀಗ ಹಾಕಿದ್ದಾರೆ. ಮುಂದಿನ ವರ್ಷವೇ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಿದೆ.
ಪ್ರಸ್ತುತ ವರ್ಷ ನವೆಂಬರ್ 2ರಂದು ಹಾಸನಬಾಂಬೆ ದೇವಸ್ಥಾನದ ಬಾಗಿಲು ತೆರೆಯಲಾಗಿತ್ತು. ಆದರೆ, ನವೆಂಬರ್ 3ರಿಂದ ನ.15ರ ಬೆಳಗ್ಗೆ 7 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಮಯದಲ್ಲಿ ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ.
ದಾಖಲೆ ಬರೆದ ಹಾಸನಾಂಬೆ: ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ 10 ಲಕ್ಷಕ್ಕೂ ಹೆಚ್ಚಿನ ಮಂದಿ ಹಾಸನಾಂಬೆ ದರ್ಶನ ಪಡೆದಿದ್ದು, ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗಿದ್ದರಿಂದ ದೇವಾಲಯಕ್ಕೆ ಈ ವರ್ಷ 6 ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಮಂಗಳವಾರ ಮಧ್ಯಾಹ್ನ 5 ಗಂಟೆವರೆಗೆ ನೇರ ದರ್ಶನದ ಟಿಕೆಟ್‌ಗಳ ಮಾರಾಟ ಮತ್ತು ಲಾಡು ಪ್ರಸಾದದ ಮಾರಾಟದಿಂದಲೇ ದಾಖಲೆ ಮಟ್ಟದ ಆದಾಯ ಬಂದಿದೆ.
ಮುಂದಿನ ವರ್ಷ ಹಾಸನಾಂಬೆ ದರ್ಶನೋತ್ಸವಕ್ಕೆ ದಿನಾಂಕ ನಿಗದಿ ಮಾಡಿದ್ದು, 2024ರ ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಹಾಸನಾಂಬೆ ದರ್ಶನ ಇರಲಿದೆ. ಇದರೊಂದಿಗೆ ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಹಾಸನಾಂಬ ದೇವಾಲಯ; 9 ದಿನದಲ್ಲಿ 5.5 ಕೋಟಿ ರೂ. ಸಂಗ್ರಹ
ಪ್ರಸ್ತುತ ಸಾಲಿನಲ್ಲಿ ಒಟ್ಟು 12 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಮುಂದಿನ ವರ್ಷ 9 ದಿನ ಮಾತ್ರ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಇರಲಿದೆ ಎಂದು ತಿಳಿದುಬಂದಿದೆ.