ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ವಿಫುಲ ಅವಕಾಶಗಳಿದ್ದು, ಪ್ರಾಮಾಣಿಕತೆ, ನಿಸ್ವಾರ್ಥತೆ ಹಾಗೂ ಕಳಕಳಿಯಿಂದ ಎಲ್ಲರೂ ಕೈ ಜೋಡಿಸಿ ಕಾರ್ಯನಿರ್ವಹಿಸಿದಾಗ ಯಶಸ್ವಿಯಾಗಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ರಾಯಚೂರು ವಿಜ್ಞಾನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗದುಗಿನ ಸಿದ್ದನಗೌಡ ಪಾಟೀಲ್ ಇವರು ಪ್ರಾರಂಭಿಸಿರುವ ಸಹಕಾರಿ ಚಳವಳಿ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಎಲ್ಲ ಕಡೆಯೂ ಸಹಕಾರಿ ಚಳವಳಿ ಅಭಿವೃದ್ದಿಯತ್ತ ಹೆಜ್ಜೆಯಿಟ್ಟಿದೆ.
ಕಾಲಕ್ರಮೇಣ ಸ್ವಾರ್ಥ ಸೇರಿಕೊಂಡು ಅನೇಕ ಹೆಸರಾಂತ ಸಹಕಾರಿ ಸಂಘಗಳು ವಿನಾಶದತ್ತ ಹೋಗಿವೆ. ನೈತಿಕ ಅಧಃಪತನ ತಾಂಡವವಾಡುತ್ತಿರುವಾಗ, ಸಹಕಾರಿ ಸಂಘಗಳು ನಷ್ಟದ ಹಾದಿ ಹಿಡಿದಿರುವದು ಕಳವಳಕಾರಿ. ಯುವಕರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಮಾಜಕ್ಕೆ ಸೇವೆ ಸಲ್ಲಿಸಲು ಸಮಾನತೆಯಿಂದ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುವ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕಿದೆ. ಹಿರಿಯ ಸಹಕಾರಿಗಳು ಯುವಕರಿಗೆ ಮಾರ್ಗದರ್ಶನ ನೀಡಿ ಮಾದರಿಯ ಸಹಕಾರಿ ಸಂಘಗಳು ಹೆಚ್ಚು ಹೆಚ್ಚು ಹುಟ್ಟಿಗೆ ಕಾರಣವಾಗಬೇಕಿದೆ ಎಂದರು.
ಕೇವಲ ಸೇವೆಗೆ ಸಹಕಾರಿ ಸಂಘಗಳು ಸೀಮಿತವಾಗದೇ ಹೊಸ ಹೊಸ ಯೋಜನೆಗಳು, ಯೋಚನೆಗಳ ಮೂಲಕ ವ್ಯಾಪಾರಿ ದೃಷ್ಟಿಯಿಂದಲೂ ಯೋಚಿಸಬೇಕಿದೆ. ಪ್ರತಿ ಕುಟುಂಬದ ಆದಾಯ ಹೆಚ್ಚಿಸಲು ಸಹಕಾರಿ ಸಂಘಗಳಿಂದ ಮಾತ್ರ ಸಾಧ್ಯವಿದೆ. ಪ್ರತಿ ಕುಟುಂಬದ ಆರ್ಥಿಕ ಅಭಿವೃದ್ದಿ ಸಮಾಜದ ಅಭಿವೃದ್ದಿಯಾಗಲಿದೆ. ಅನೇಕ ಸಹಕಾರಿಗಳ ನಿರಂತರ ನಿಸ್ವಾರ್ಥ ಪ್ರಯತ್ನ ಯಶಸ್ಸಿಗೆ ಕಾರಣವಾಗಿದೆ ಎಂದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಸಹಕಾರಿ ಚಳವಳಿಯಲ್ಲಿ ಹೆಚ್ಚು ಹೆಚ್ಚು ಜನರು ತೊಡಗಿಸಿಕೊಳ್ಳುವ ಅವಶ್ಯಕತೆಯಿದೆ. ಹೊಸ ಹೊಸ ಜನರು ಸದಸ್ಯತ್ವ ಪಡೆಯುವದರಿಂದ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಾಧ್ಯವಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಸಹಕಾರಿ ರಂಗಕ್ಕೆ ಹೆಚ್ಚು ಒತ್ತು ನೀಡಲು ಸರ್ಕಾರ ಮುಂದಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಹೊಸ ಹೊಸ ಚಿಂತನೆಗಳು, ಪ್ರಯೋಗಗಳು ನಡೆದು ಜನರನ್ನು ತಲುಪಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ವೀರುಪನಗೌಡ ಇಟಗಿ, ಮಲ್ಲನಗೌಟ ಮಟ್ಟೂರು, ಮಲ್ಲಪ್ಪ ಪಾಟೀಲ್, ಎನ್.ವಿ.ಪಾಟೀಲ್, ಮಂಜುಳಾ ಪಾಟೀಲ್ ಸಿಂಧನೂರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನೇಕ ಸಹಕಾರಿ ಸಂಘಗಳನ್ನು ಸಹ ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಸಕರುಗಳಾದ ಹಂಪನಗೌಡ ಬಾದರ್ಲಿ, ಹಂಪಯ್ಯನಾಯಕ, ಬಸನಗೌಡ ದದ್ದಲ್, ಕರಿಯಮ್ಮ ನಾಯಕ ಚಿಂತಲಕುಂಟಿ, ವಿಧಾನ ಪರಿಷತ್ ಸದಸ್ಯ ಶರಣಗೌಡ ಭಯ್ಯಾಪುರು, ಮಹಾಂತೇಶ ಪಾಟೀಲ್ ಅತ್ತನೂರು, ವಿಶ್ವನಾಥ ಪಾಟೀಲ್ ತೋರಣದಿನ್ನಿ, ವಿಜಯಕುಮಾರ್ ಶಾವಂತಗೇರಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಬಷೀರುದ್ದೀನ್ ಸೇರಿ ಅನೇಕರಿದ್ದರು.
ಜಿಲ್ಲಾಧಿಕಾರಿ ಚಂದ್ರಶೇಖರನಾಯಕ, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ ತುಕಾರಾಂ ಪಾಂಡ್ವೆ, ಸಹಕಾರ ಸಂಘಗಳ ಅಪರ ನಿಬಂಧಕ ಎಚ್.ಬಾಲಶೇಖರ, ರಾಜ್ಯ ಸಹಕಾರ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ನವೀನ್, ಎಣ್ಣೆ ಬೀಜ ಬೆಳೆಗಾರರ ಸಂಘ ಜಿ.ಸಿ.ರೆಡ್ಡಿ, ಸಹಕಾರ ಗ್ರಾಹಕ ಮಹಾಮಂಡಳದ ಅಪರ ನಿಬಂಧಕ ಡಾ.ಗುರುಸ್ವಾಮಿ, ಪಟ್ಟಣ ಸಹಕಾರ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧೀಕಾರಿ ಪುಂಡಲೀಕ ಕೆರೂರು, ಜಿಲ್ಲಾ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶನ ಐ.ಎಸ್.ಗಿರೆಡ್ಡಿ ಸೇರಿದಂತೆ ಅನೇಕ ಸಹಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.