ಸಾಲಬಾಧೆ ತಾಳದೆ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಸ್ಕಿ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಬಸವರಾಜ್ ಆತ್ಮಹತ್ಯೆ ಮಾಡಿಕೊಂಡ ರೈತ. ಆರು ಲಕ್ಷ ರೂ. ಸಾಲ ಮಾಡಿ ಐದು ಎಕರೆ ಜಮೀನಿನಲ್ಲಿ ತೊಗರಿ, ಹತ್ತಿ ಬೆಳೆ ಬೆಳೆದಿದ್ದರು. ಬೆಳೆ ಕೈಕೊಟ್ಟಿದ್ದು, ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆ ಹಾನಿ ವೀಕ್ಷಣೆಗೆ ಗೋನಾಳ ಗ್ರಾಮಕ್ಕೆ ತೆರಳಿದ್ದ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಶಾಸಕ ಬಸನಗೌಡ ದದ್ದಲ್, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳದೇ ಮರಳಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ನ.13ರಂದು ಸಾಲಬಾಧೆಗೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಗೆ ಮಾಹಿತಿಯೇ ಇಲ್ಲ. ಇನ್ನು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಉಸ್ತುವಾರಿ ಸಚಿವರಿಗೆ ಮಾಹಿತಿಯನ್ನು ನೀಡದೇ ಮುಚ್ಚಿಡಲಾಗಿದೆ. ಕನಿಷ್ಠ ಸೌಜನ್ಯದ ಸಾಂತ್ವಾನ ಹೇಳದೇ ಇರುವ ಸಚಿವರು, ಶಾಸಕರ ನಡೆಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.