ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಕಾರು ತಡೆದು ಹಣ, ಚಿನ್ನ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಳವಾಗಿವೆ. ಬೇಕಂತಲೇ ಕಾರಿಗೆ ಡಿಕ್ಕಿ ಹೊಡೆದು ಜಗಳ ತೆಗೆದು ಹಣ ನೀಡುವಂತೆ ಧಮ್ಕಿ ಹಾಕುವ ಪ್ರಕರಣಗಳೂ ಈಗಾಗಲೇ ನಗರದಲ್ಲಿ ವರದಿಯಾಗಿವೆ.
ಈ ಘಟನೆಗಳಿಗೆ ಸಂಬಂಧಿಸಿದಂತೆ, ಇತ್ತೀಚೆಗೆ ನಗರದಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು, ಈ ಬಗ್ಗೆ ಸಂತ್ರಸ್ತೆಯ ಪತಿ ಸೃಜನ್ ಆರ್ ಶೆಟ್ಟಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವಿವರವಾಗಿ ಬರೆದು ಪೋಸ್ಟ್ ಮಾಡಿದ್ದಾರೆ.
“ನವೆಂಬರ್ 8 ರಂದು ಸರ್ಜಾಪುರದಿಂದ ರಾತ್ರಿ ವೇಳೆ, ಕ್ಯಾಬ್ ಸಿಗುವುದು ಕಷ್ಟವೆಂದು ಭಾವಿಸಿ ನನ್ನ ಪತ್ನಿ ತನ್ನ ಕೆಲವು ಸಹೋದ್ಯೋಗಿಗಳನ್ನು (ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ) ಡ್ರಾಪ್ ಮಾಡಲು ಮುಂದಾಗಿದ್ದಾಳೆ. ಈ ವೇಳೆ, ನನ್ನ ಪತ್ನಿಯ ಕಾರನ್ನು ಕೆಲವು ಕಿಲೋ ಮೀಟರುಗಳಷ್ಟು ಪುರುಷರ ಗುಂಪೊಂದು ಹಿಂಬಾಲಿಸಿದೆ” ಎಂದು ಬರೆದುಕೊಂಡಿದ್ದಾರೆ.
“ಈ ಬಗ್ಗೆ ತಿಳಿದ ನನ್ನ ಪತ್ನಿ ಮುಂದಾಗುವ ಅಪಾಯದ ಮುನ್ಸೂಚನೆ ಮೊದಲೇ ತಿಳಿದು ನಗರದ ಮುಖ್ಯ ರಸ್ತೆಯಲ್ಲಿಯೇ ವಾಹನವನ್ನು ನಿಲ್ಲಿಸಿದ್ದಾಳೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ” ಎಂದು ಹೇಳಿದ್ದಾರೆ.
“ಗಾಡಿಯನ್ನು ಚೇಸ್ ಮಾಡುವಾಗ ನನ್ನ ಪತ್ನಿ ಯಾವುದೇ ವಾಹನಗಳಿಗೆ ಹಾನಿ ಮಾಡಿಲ್ಲ. ಆದರೂ, ಪುರುಷರ ಗುಂಪು ಕಾರಿನಿಂದ ಕೆಳಗಡೆ ಇಳಿಯುವಂತೆ ಧಮ್ಕಿ ಹಾಕಿದ್ದಾರೆ. ಕಾರಿನಿಂದ ಹೊರಬರಲು ನನ್ನ ಪತ್ನಿ ಮತ್ತು ಆಕೆಯ ಸಹೋದ್ಯೋಗಿಗಳು ನಿರಾಕರಿಸಿದಾಗ ಕೆಲವು ಟೆಂಪೋ ಡ್ರೈವರ್‌ಗಳು ಆಕೆಯ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಕನ್ನಡ ಮಾತನಾಡಲು ಬಾರದ ಜನರ ಮೇಲೆ ಒತ್ತಡ ಹೇರುವ ಪ್ರಯತ್ನ ಇದಾಗಿದೆ. ಈ ವೇಳೆ, ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ವ್ಯಕ್ತಿಗೆ ಯಾರೊಬ್ಬರೂ ಸಹಾಯ ಮಾಡಲು ಮುಂದೆ ಬರಲಿಲ್ಲ” ಎಂದು ಆರೋಪಿಸಿದ್ದಾರೆ.
“ನನ್ನ ಪತ್ನಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಜತೆಗೆ, ಅವಳ 10 ಸ್ನೇಹಿತರನ್ನು ತಕ್ಷಣವೇ ಅವಳು ಇರುವ ಸ್ಥಳಕ್ಕೆ ಕರೆಸಿಕೊಳ್ಳುವ ಬುದ್ಧಿವಂತಿಕೆ ತೋರಿದ್ದಾಳೆ. ಒಂದು ವೇಳೆ ಪೊಲೀಸರಿಗೆ ಕರೆ ಮಾಡದೆ ಇದ್ದಿದ್ದರೆ ಈ ಘಟನೆ ಬೇರೆಯದೇ ತಿರುವು ಪಡೆದುಕೊಳ್ಳಬಹುದಿತ್ತು” ಎಂದಿದ್ದಾರೆ.
“ಸರ್ಜಾಪುರ ಇಂತಹ ಘಟನೆಗಳಿಗೆ ಹಾಟ್‌ಸ್ಪಾಟ್ ಆಗಿದೆ. ಬೆಂಗಳೂರು ಪ್ರಶಾಂತವಾದ ನಗರವಾಗಿದೆ. ಆದರೂ ಇಂತಹ ಘಟನೆ ನಡೆದಿದೆ. ನಮಗೆ ಭದ್ರತೆ ಬೇಕು, ಅದರ ಜರೂರತ್ತು ಈಗ ಹೆಚ್ಚಾಗಿದೆ. ಈ ಅಪಾಯಗಳನ್ನು ತಡೆಯಲು ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ” ಎಂದು ತಿಳಿಸಿದ್ದಾರೆ.
I’ve never felt unsafe in Bangalore – I know my privilege of being a Kannada speaking male – but last Thursday night I felt how unsafe certain parts of the city are post 10pm.
I’ve seen those horrific videos of fake accidents in Sarjapur where hooligans have tried to blackmail… pic.twitter.com/lwHK8dymZM
— Srijan R Shetty (@srijanshetty) November 14, 2023
ನಾನು ಬೆಂಗಳೂರಿನಲ್ಲಿ ಎಂದಿಗೂ ಅಸುರಕ್ಷಿತ ಎಂದು ಭಾವಿಸಿಲ್ಲ. ಕನ್ನಡ ಮಾತನಾಡುವ ಪುರುಷ ಎಂಬ ನನ್ನ ವಿಶೇಷತೆ ನನಗೆ ತಿಳಿದಿದೆ. ಆದರೆ, ಕಳೆದ ಗುರುವಾರ ರಾತ್ರಿ ನಾನು ನಗರದ ಕೆಲವು ಭಾಗಗಳು ರಾತ್ರಿ 10 ಗಂಟೆಯ ನಂತರ ಎಷ್ಟು ಅಸುರಕ್ಷಿತವಾಗಿದೆ ಎಂದು ಭಾವಿಸಿದೆ.
“ನಾನು ಸರ್ಜಾಪುರದಲ್ಲಿ ನಕಲಿ ಅಪಘಾತಗಳ ಭಯಾನಕ ವೀಡಿಯೊಗಳನ್ನು ನೋಡಿದ್ದೇನೆ. ಅಲ್ಲಿ ಗೂಂಡಾಗಳು ಕಾರಿನಲ್ಲಿ ಜನರನ್ನು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದಾರೆ. 24×7 ಜನರು ಇರುವ ಬೆಂಗಳೂರಿನ ಭಾಗಗಳು ಇಂದಿರಾನಗರ, ಕೋರಮಂಗಲ, ಎಂ.ಜಿ ರಸ್ತೆ ಮುಂತಾದವು ಸುರಕ್ಷಿತವಾಗಿವೆ ಎಂದು ಇನ್ನೂ ಭಾವಿಸುತ್ತೇವೆ. ಜನರು ಹೆಚ್ಚಾಗಿ ಓಡಾಡದ ಸ್ಥಳಗಳಲ್ಲಿ ಉತ್ತಮ ಜಾಗರೂಕತೆಯ ಅಗತ್ಯವಿದೆ” ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಕರಡು ಮತದಾರರ ಪಟ್ಟಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ವಿಶೇಷ ಅಭಿಯಾನ
ಸದ್ಯ ಈ ಟ್ವೀಟ್ ವೈರಲ್ ಆಗಿದ್ದು, ಹಲವು ಜನ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಬಳಕೆದಾರರು ಈ ಟ್ವೀಟ್ ಅನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
“ಈ ಘಟನೆ ನಡೆದ ನಿರ್ದಿಷ್ಟ ಸ್ಥಳದ ವಿವರ ಮತ್ತು ನಿಮ್ಮ ಸಂಪರ್ಕ ವಿವರಗಳನ್ನು ಡಿಎಮ್ ಮೂಲಕ ದಯವಿಟ್ಟು ಒದಗಿಸಿ” ಎಂದು ಬೆಂಗಳೂರು ನಗರ ಪೊಲೀಸರು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.