- ‘ನಮಗೆ ವಿಶ್ವ ಮಾನವರಾಗಲು ಸಾಧ್ಯವಾಗದಿದ್ದರೂ ಅಲ್ಪ ಮಾನವರು ಮಾತ್ರ ಆಗಬಾರದು’
- ‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡುವ ಬಗ್ಗೆ ಸೂಕ್ತ ನಿರ್ಧಾರ’
ಸಂವಿಧಾನ ಮತ್ತು ಶರಣ ಸಾಹಿತ್ಯದ ಆಶಯ ಒಂದೇ ಆಗಿದೆ. ಜಾತಿ ತಾರತಮ್ಯ ಇಲ್ಲದ ಸಮಾಜ ನಿರ್ಮಾಣ ಇವೆರಡರ ಗುರಿಯೂ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹದಿನೆಂಟನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಮಾಡಿ, ಎಸ್.ಷಡಕ್ಷರಿ ಅವರ “ಕ್ಷಣ ಹೊತ್ತು ಅಣಿಮುತ್ತು” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
“ಸಂವಿಧಾನ ವಿರೋಧಿಗಳು ಶರಣ ಸಾಹಿತ್ಯವನ್ನೂ ಒಪ್ಪುವುದಿಲ್ಲ. ಇಂತಹ ಸಂವಿಧಾನ ವಿರೋಧಿಗಳನ್ನು ನಾವು ದೂರ ಇಡಬೇಕು. ಸಮಾಜದ ಋಣ ನಮ್ಮ ಮೇಲಿದೆ. ಆ ಋಣವನ್ನು ತೀರಿಸುವ ಮೂಲಕ ಬಸವಾದಿ ಶರಣರ ಆಶಯದ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಶರಣರು ನುಡಿದಂತೆ ನಡೆದವರು. ನಾವೂ ಆ ಮಾರ್ಗದಲ್ಲಿ ನಡೆಯಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ-ಜೆಡಿಎಸ್‌ನವರಿಗೆ ಮಾಡಲು ಏನೂ ಕೆಲಸ ಇಲ್ಲ : ಡಿ ಕೆ ಶಿವಕುಮಾರ್
“ವಚನ ಸಂಸ್ಕೃತಿ ಅಂದರೆ ಮಾನವೀಯ ಸಂಸ್ಕೃತಿ. ಮಾನವೀಯ ಬದಲಾವಣೆಯನ್ನು ಸಮಾಜದಲ್ಲಿ ತರಲು ಬಸವಾದಿ ಶರಣರು ಹೋರಾಟ ಮಾಡಿದರು. ಶೂದ್ರ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಕಾರಣಕ್ಕೆ ಬಡತನ ಮತ್ತು ತಾರತಮ್ಯ ಹೆಚ್ಚಾಯಿತು. ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಮೇಲು ಕೀಳಿನ, ಜಾತಿ ತಾರತಮ್ಯದ ವ್ಯವಸ್ಥೆಯನ್ನು ಅಳಿಸಿ ಮನುಷ್ಯರಾಗಿ ಬಾಳುವುದೇ ಅತ್ಯುನ್ನತ ಧರ್ಮ ಎಂದು ಸಾರಿದರು. ನಾವು ವಿಶ್ವ ಮಾನವರಾಗದಿದ್ದರೂ ಬೇಡ, ಅಲ್ಪ ಮಾನವರಾಗಬಾರದು” ಎಂದರು.
ದ್ವೇಷ, ವೈರತ್ವ, ಸೇಡು ಮನುಷ್ಯನ ಗುಣ ಅಲ್ಲ. ಪ್ರಾಣಿಗಳನ್ನು ಪ್ರೀತಿಸುವ ನಾವು ಮನುಷ್ಯರನ್ನು ಜಾತಿ-ಧರ್ಮದ ಕಾರಣಕ್ಕೆ ದ್ವೇಷಿಸುತ್ತೀವಿ. ಇದು ಅತ್ಯಂತ ಅನಾಗರಿಕ ಎಂದು ವಿವರಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡುವ ಬೇಡಿಕೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಇದೇ ವೇಳೆ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ.ಸೋಮಣ್ಣ, ಸಾಹಿತಿ ಗೊ.ರು.ಚನ್ನಬಸಪ್ಪ, ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್.ಷಡಕ್ಷರಿ, ಪತ್ರಕರ್ತರಾದ ವಿಶ್ವೇಶ್ವರ್ ಭಟ್, ರವಿ ಹೆಗಡೆ, ಲೇಖಕಿ ವೀಣಾ ಬನ್ನಂಜೆ, ಮನು ಬಳಿಗಾರ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.