ಪ್ರಸಾದ ಮದ್ಲಾಪುರ ಹತ್ಯೆ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಎಂದು ಆಗ್ರಹಿಸಿ ದಲಿತ ಪರ ಸಂಘಟನೆಗಳು ಇಂದು ಮಾನ್ವಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾರ‍್ಯಾಲಿ ನಡೆಸಿದವು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಾವಿರಾರು ಮಾದಿಗ ಮತ್ತು ಛಲವಾದಿ ಸಮಾಜದ ಜನರು ಜಮಾಯಿಸಿ ಘೋಷಣೆ ಕೂಗಿ, ಪ್ರಸಾದ್ ಹತ್ಯೆಯನ್ನು ಖಂಡಿಸಿದರು. ಅಂಬೇಡ್ಕರ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನಾರ‍್ಯಾಲಿ ನಡೆಸಿದರು. ಅ.30ರಂದು ಪ್ರಸಾದ ಮದ್ಲಾಪುರ ಹತ್ಯೆ ನಡೆದರೂ, ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ಸಂಚು ರೂಪಿಸಿ ಪ್ರಸಾದನನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು ಈ ಕೊಲೆಯ ಹಿಂದೆ ಇರುವ ಕಾಣದ ಕೈಗಳನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮಾದಿಗ ಮತ್ತು ಛಲವಾದಿ ಜನಾಂಗದವರ ಮೇಲೆ ನಿರಂತರ ದೌರ್ಜನ್ಯ, ಕೊಲೆ ಪ್ರಕರಣ ನಡೆಯುತ್ತಿವೆ. ಈ ಕುರಿತು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದರಲ್ಲಿ ತೋರುತ್ತಿರುವ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೊಲೆ ಪ್ರಕರಣವನ್ನು ಸಂಪೂರ್ಣವಾಗಿ ಸಿಬಿಐಗೆ ಒಪ್ಪಿಸಬೇಕು. ಪ್ರಸಾದನ ಕುಟುಂಬದವರಿಗೆ ನ್ಯಾಯ ಒದಗಿಸಿ, ಸರ್ಕಾರದಿಂದ ಪರಿಹಾರ ಹಾಗೂ ಇನ್ನಿತರೇ ಸೌಲಭ್ಯಗಳನ್ನು ಒದಗಿಸಬೇಕು. ಜೀವ ಭಯದಲ್ಲಿರುವ ಪ್ರತ್ಯಕ್ಷ ಸಾಕ್ಷಿ ಹಾಗೂ ಗ್ರಾಮದ ದಲಿತ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಸಂಘಟನೆಗಳ ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಎಂ.ವಿರುಪಾಕ್ಷಿ, ಎಸ್. ಮಾರೆಪ್ಪ, ಅಂಬಣ್ಣ ಅರೋಲಿ, ರವೀಂದ್ರನಾಥ ಪಟ್ಟಿ, ಹನುಮಂತಪ್ಪ ಮನ್ನಾಪೂರು ಸೇರಿದಂತೆ ಅನೇಕ ಹೋರಾಟಗಾರರು ಮಾತನಾಡಿ, ಪ್ರಸಾದ್ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಎಂ.ಆರ್. ಭೇರಿ, ಅಂಬ್ರೊಸ್ ಸಿಂಧನೂರು, ಚಂದ್ರಶೇಖರ ಕುರ್ಡಿ, ಪಿ.ತಿಪ್ಪಣ ಬಾಗಲವಾಡ, ವಸಂತ ಕೊಡ್ಲಿ, ರಾಜಪ್ಪ ಹೊನ್ನಟಿಗಿ, ಶಿವರಾಜ ಜಾನೇಕಲ್, ಪಿ.ಆನಿಲ್‌ಕುಮಾರ, ಜಯಪ್ರಕಾಶ, ಸಂದೇಶ ಕೋಲಾರ, ಪ್ರಭುರಾಜ ಕೊಡ್ಲಿ, ಚಿನ್ನಪ್ಪ ಪಟ್ಟದಕಲ್, ಪಿ. ರವಿಕುಮಾರ, ಬಸವರಾಜ ನಕ್ಕುಂದಿ, ಯಲ್ಲಪ್ಪ ಬಾದರದಿನ್ನಿ, ಮನೋಹರ ಸಿರವಾರ, ಲಕ್ಷ್ಮಣ ಜಾನಕೇಲ್, ನರಸಪ್ಪ ಜೂಕೂರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ರ‍್ಯಾಲಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ವರದಿ : ಶ್ರೀನಿವಾಸ ರೆಡ್ಡಿ