ಉತ್ತರಖಂಡ ಸುರಂಗ ದುರಂತ: ಮನುಕುಲದ ಉಳಿವಿಗಲ್ಲದೆ ಮತ್ಯಾರಿಗಾಗಿ ಅಭಿವೃದ್ಧಿ

Date:

Advertisements

ಕೆಲದಿನಗಳ ಹಿಂದೆ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಪಟ್ಟಣಕ್ಕೆ ಸಮೀಪದಲ್ಲಿರುವ ಗಂಗೋತ್ರಿ – ಯಮುನೋತ್ರಿ ಹೆದ್ದಾರಿಯಲ್ಲಿ(ಚಾರ್ ಧಾಮ್) ಸಿಲ್ಕಿಯಾರ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಿಸಲಾಗುತ್ತಿರುವ ಸರ್ವಋತು ಸುರಂಗ ಕುಸಿದು 40 ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡರು. ವಾರ ಸಮೀಪಿಸಿದರೂ ಸುರಂಗದಲ್ಲಿರುವ ಕಾರ್ಮಿಕರನ್ನು ರಕ್ಷಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮಾಡುತ್ತಿರುವ ನಿರಂತರ ಪ್ರಯತ್ನ ಇನ್ನೂ ಮುಂದುವರೆಯುತ್ತಿದೆ.

ಸುರಂಗ ಕುಸಿದು ಬಿದ್ದ ನಂತರ ಕಾರ್ಮಿಕರನ್ನು ಎರಡು ದಿನದಲ್ಲಿ ವಾಪಸ್‌ ಕರೆತರಲು ಎಂಜಿನಿಯರ್‌ಗಳು ಮೊದಲು ಅಂದಾಜಿಸಿದ್ದರು. ಆದರೆ ಅರ್ಧ ದಾರಿ ಕ್ರಮಿಸಿದ್ದ ವಾಪಸ್‌ ಕರೆತರುವ ಪೈಪ್‌ಗಳಿಗೆ ಮಂಗಳವಾರ (ನ.14) ಮತ್ತೊಮ್ಮೆ ಕುಸಿದ ಸುರಂಗದ ತ್ಯಾಜ್ಯ ತೀವ್ರ ಅಡ್ಡಿಯಾಗಿದೆ. ತುದಿ ತಲುಪಿದರೆ ಆ ಮೂರು ಅಡಿ ಅಗಲದ ಪೈಪ್‌ಗಳ ಮೂಲಕವೇ ಕಾರ್ಮಿಕರು ಒಬ್ಬೊಬ್ಬರಾಗಿ ನುಸುಳಿ ಹೊರಬರಬೇಕಿದೆ. ಈ ಗಂಡಾಂತರ ಇನ್ನೂ ಮುಗಿದಿಲ್ಲ, ಮುಗಿಯುವುದೂ ಇಲ್ಲ. ಸುರಂಗ ಪೂರ್ಣಗೊಂಡರೂ ನಿತ್ಯವೂ ಸಾವಿನ ಭಯದಲ್ಲಿ ಅಮಾಯಕ ಸಾರ್ವಜನಿಕರು ಸಂಚಾರ ನಡೆಸಬೇಕಾಗುತ್ತದೆ.

ಅಷ್ಟಕ್ಕೂ ಈ ಸುರಂಗ ಏಕಾಏಕಿ ಸಂಭವಿಸಿದ್ದಲ್ಲ. ಮಾನವನ ದುರಾಸೆಗೆ ಹತ್ತಾರು ವರ್ಷಗಳಿಂದ ಪ್ರಕೃತಿ ಎಚ್ಚರಿಕೆ ನೀಡುತ್ತಲೆ ಬಂದಿತ್ತು. ತನ್ನ ನಿಯಮ ಪಾಲಿಸದಿದ್ದಾಗ ಲೆಕ್ಕವಿಲ್ಲದಷ್ಟು ಬಲಿಗಳನ್ನು ಪಡೆದಿತ್ತು. ಪೆಟ್ಟುಗಳನ್ನು ತಿಂದರೂ ಮನುಷ್ಯ ಮಾತ್ರ ತನ್ನ ಆಸೆಯ ಮಿತಿಗೆ ಪೂರ್ಣ ವಿರಾಮ ಹಾಕುತ್ತಿಲ್ಲ.

Advertisements

ಮಾರ್ಗವನ್ನು 26 ಕಿ.ಮೀ.ನಿಂದ 4.5 ಕಿ.ಮೀ.ಗೆ ಕಡಿಮೆಗೊಳಿಸುವ ಕಾರಣದಿಂದ ಉತ್ತರಕಾಶಿ ಪಟ್ಟಣದ ಸಮೀಪ 853.79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಲ್ಕಿಯಾರ – ದಾಂಡಲ್‌ಗಾಂವ್ ಸುರಂಗ ಮಾರ್ಗವು ಸರ್ವ ಋುತುಗಳ ದ್ವಿಪಥ ರಸ್ತೆಯಾಗಿದೆ. ಚಾರ್‌ಧಾಮ್‌ನ ಪ್ರದೇಶದ ಅತಿ ಉದ್ದನೆಯ ಸುರಂಗ ಮಾರ್ಗ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು ಸಿಲ್ಕಿಯಾರ ಕಡೆಯಿಂದ 2.3 ಕಿ.ಮೀ, ಬಾಕ್‌ಕೋಟ್‌ನಿಂದ 1.6 ಕಿ.ಮೀ. ಪೂರ್ಣಗೊಂಡಿದೆ. ಸದ್ಯ ಪೂರ್ಣಗೊಳ್ಳಲು 400 ಮೀಟರ್‌ ಮಾತ್ರ ಬಾಕಿ ಉಳಿದಿದೆ.

ಧರ್ಮ ರಾಜಕಾರಣ, ಅವೈಜ್ಞಾನಿಕ ಯೋಜನೆ, ಭೂವಿಜ್ಞಾನಿಗಳ ಎಚ್ಚರ

ಸರ್ಕಾರಗಳು ಇತ್ತೀಚಿನ ವರ್ಷಗಳಲ್ಲಿ ಮತ ರಾಜಕಾರಣದ ಧಾರ್ಮಿಕ ಹಿತಾಸಕ್ತಿಗಳನ್ನು ಪೋಷಿಸುವ ಸಲುವಾಗಿ ಅಮಾಯಕರನ್ನು ಬಲಿ ಕೊಡುತ್ತಿವೆ. ದೇಶದ ಅಭಿವೃದ್ಧಿಗಾಗಿ ಮೂಲ ಸೌಕರ್ಯಗಳ ನಿರ್ಮಾಣ ಮತ್ತು ಅಭಿವೃದ್ಧಿ ಚಟುವಟಿಕೆಗಳು ಖಂಡಿತಾ ಅಗತ್ಯವಿದೆ. ಆದರೆ ಅವು ಸದುದ್ದೇಶಕ್ಕಿಂತ ಸ್ವಹಿತಾಸಕ್ತಿಯೆ ಹೆಚ್ಚು ಒಳಗೊಂಡಿವೆ. ಚಾರ್ ಧಾಮ್‌ ಯೋಜನೆಯ ನಿರ್ಮಾಣದ ಹಿಂದೆ ಪ್ರಬಲ ರಾಜಕೀಯ ವಿಚಾರಗಳಿವೆ. ಪ್ರವಾಸೋದ್ಯಮದ ಉತ್ತೇಜನವು ಧಾರ್ಮಿಕ ವಿಚಾರಗಳನ್ನು ಮಾತ್ರ ಒಳಗೊಂಡಿದೆ.

ಹಲವಾರು ಕಾನೂನುಗಳನ್ನು ಉಲ್ಲಂಘಿಸಿ ಮತ್ತು ಸಾಕಷ್ಟು ಪರಿಸರ ಪರಿಣಾಮದ ಮೌಲ್ಯ ಮಾಪನವಿಲ್ಲದೆ ಉತ್ತರಖಂಡ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಇದು 55,000 ಮರಗಳನ್ನು ಹೊಂದಿರುವ ಸುಮಾರು 690 ಹೆಕ್ಟೇರ್ ಕಾಡುಗಳ ನಾಶ ಮತ್ತು ಸುಮಾರು 20 ಮಿಲಿಯನ್ ಘನ ಮೀಟರ್ ಮಣ್ಣನ್ನು ಸ್ಥಳಾಂತರಿಸುವುದನ್ನು ಕೂಡ ಒಳಗೊಂಡಿದೆ. ಇದಲ್ಲದೆ ಇಳಿಜಾರು ನೆಲಸಮ, ಸುರಂಗ, ಶಿಲಾಖಂಡ ರಾಶಿಗಳ ಉತ್ಪಾದನೆಯು ಸೇರಿ ಹಲವು ಕಾರ್ಯಗಳು ದುರ್ಬಲವಾದ ಭೂಪ್ರದೇಶದ ಮೇಲೆ ಭಾರಿ ಪ್ರಮಾಣದಲ್ಲಿ ಒತ್ತಡ ಉಂಟುಮಾಡುತ್ತದೆ ಎಂದು ಭೂವಿಜ್ಞಾನಿಗಳು ನಿರಂತರ ಎಚ್ಚರಿಕೆ ನೀಡುತ್ತಲೆ ಬಂದಿದ್ದಾರೆ.

ಹಿಮಾಲಯವು ಬೆಳೆಯುವ, ಕರಗುವ ಪ್ರಕ್ರಿಯೆಯ ಉತ್ತುಂಗದಲ್ಲಿದೆ. ಇಲ್ಲಿನ ಭೂ ಪದರಗಳು ಗಟ್ಟಿ ಇಲ್ಲ. ಅದರಲ್ಲೂ ಸುರಂಗ ನಿರ್ಮಿಸುತ್ತಿರುವ ಪ್ರದೇಶದ ಆಳದಲ್ಲಿ ಇರುವುದು ಸುಣ್ಣದ ಕಲ್ಲುಗಳು. ನೀರು ಮತ್ತು ಬಿಸಿಗೆ ಸುಲಭವಾಗಿ ಕರಗುತ್ತವೆ. ಇದರಿಂದಾಗಿ ಒಳರಚನೆಯಲ್ಲಿ ನಿರಂತರ ಬದಲಾವಣೆ ಆಗುತ್ತಲೇ ಇರುತ್ತದೆ. ಈ ಕಾರಣ ಇಲ್ಲಿ ಸುರಂಗದಂತಹ ಕಾಮಕಾರಿಗಳನ್ನು ಕೈಗೊಂಡರೆ ಭೂಕುಸಿತಕ್ಕೆ ದಾರಿ ಎಂಬ ಎಚ್ಚರಿಕೆ ನೀಡಿದರೂ ಉತ್ತರಖಂಡ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸದಾ ಭೂಮಿ ಕಂಪಿಸುವ ಕಾರಣದಿಂದ ಸುರಂಗದ ನೆಲದಡಿ ಸಡಿಲವಾಗುತ್ತದೆ. ಸುರಂಗದ ಆರ್‌ಸಿಸಿ ಸ್ಲ್ಯಾಬ್‌ಗಳು ಅತ್ತಿತ್ತ ಸರಿದು ಅವು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ಈ ಸ್ಲ್ಯಾಬ್‌ಗಳ ಮೇಲೆ ಮತ್ತು ಅಕ್ಕಪಕ್ಕ ಬೀಳುವ ಒತ್ತಡ ಬದಲಾಗುವ ಕಾರಣ, ಅವು ಒಡೆಯುವ ಅಪಾಯವಿರುತ್ತದೆ.

ಚಾರ್‌ಧಾಮ್ ಕಾರಿಡಾರ್‌ನಲ್ಲಿ ಸುಮಾರು 100 ಕಿ.ಮೀ.ನಷ್ಟು ಉದ್ದದ 14 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯಲ್ಲಿ ಹಲವಾರು ಅವೈಜ್ಞಾನಿಕ ಅಂಶಗಳಿವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿ ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಈ ಯೋಜನೆಗಳ ಅಧ್ಯಯನಕ್ಕಾಗಿ ಸುಪ್ರೀಂ ಕೋರ್ಟ್‌ ರಚಿಸಿದ್ದ ಉನ್ನತ ಮಟ್ಟದ ಸಮಿತಿಯ ಕೆಲ ಸದಸ್ಯರೂ ಚಾರ್‌ಧಾಮ್ ಯೋಜನೆ ಬಗ್ಗೆ ತಮ್ಮ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಆದರೆ ಹೆಚ್ಚು ಅಗಲವಾದ ರಸ್ತೆ ಬೇಕು ಎಂಬ ಉತ್ತರಖಂಡ ಸರ್ಕಾರದ ವಾದ ಒಪ್ಪಿದ್ದ ಕೋರ್ಟ್ ಕಾಮಗಾರಿಗೆ ಅನುಮತಿ ನೀಡಿತ್ತು. ಈ ಕಾರಣದಿಂದ ಸುರಂಗ ಮಾರ್ಗಗಳನ್ನು ಒಳಗೊಂಡ, ಎರಡು ಪಥಗಳ ಸರ್ವಋತು ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿದೆ.

ಈ ಸುದ್ದಿ ಓದಿದ್ದೀರಾ? ಆ್ಯಪ್‌ನಲ್ಲಿ ಎರಡು ನಂಬರ್ ಅಕೌಂಟ್ ಬಳಸುವ ಆಯ್ಕೆ ಪರಿಚಯಿಸಿದ ವಾಟ್ಸಾಪ್

ಹಲವು ಕಡೆ ಗಂಭೀರ ಹಾನಿ

ಕೆಲವು ವರ್ಷಗಳಿಂದ ಹಿಮಾಲಯದ ಎತ್ತರದ ಪ್ರದೇಶಗಳು ಮತ್ತು ಕೆಳಗಿನ ಪ್ರದೇಶಗಳಲ್ಲಿ ಭೂಕುಸಿತಗಳು, ಹಠಾತ್ ಪ್ರವಾಹಗಳು ಮತ್ತು ಭೂಕಂಪಗಳು ಉಂಟಾಗುತ್ತಿವೆ. ಕಳೆದ ವರ್ಷ ಜೋಶಿ ಮಠದ ಹಲವೆಡೆ ಭೂಮಿ ಬಿರುಕು ಬಿಟ್ಟು ಅಲ್ಲಿನ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.

ಚಾರ್‌ಧಾಮ್‌ ಯೋಜನೆಯ ಭಾಗವಾಗಿ ಉತ್ತರಕಾಶಿಯ ಬಳಿ ನಿರ್ಮಿಸಲಾಗುತ್ತಿರುವ ಚುಂಗ್ರಿ-ಬಡೇತಿ ಸುರಂಗ ಮಾರ್ಗದಲ್ಲಿ ಭೂಕುಸಿತ ಸಂಭವಿಸಿತ್ತು. ಸುರಂಗ ಮಾರ್ಗವು ಸಾಗುವ ಪರ್ವತದ ಭಾಗವು ಇದೇ ಜುಲೈನಲ್ಲಿ ಕುಸಿದಿತ್ತು. ಸುರಂಗದಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿ ಈ ಕುಸಿತ ಸಂಭವಿಸಿತ್ತು.

ಹಿಮಾಲಯದಲ್ಲಿ ಮತ್ತೊಂದು ಪರಿಸರ ಸಂಬಂಧಿತ ವಿಪತ್ತು ಅಕ್ಟೋಬರ್ 4 ರಂದು ದೇಶವನ್ನು ಬೆಚ್ಚಿಬೀಳಿಸಿತು, ಸಿಕ್ಕಿಂನಲ್ಲಿ ಮೇಘಸ್ಫೋಟವು ದಕ್ಷಿಣ ಲೊನಾಕ್ ಸರೋವರವನ್ನು ಅದರ ದಡವನ್ನು ಉಲ್ಲಂಘಿಸಲು ಕಾರಣವಾಯಿತು. ನಿಯಂತ್ರಿತ ರೀತಿಯಲ್ಲಿ ನೀರನ್ನು ಬಿಡುಗಡೆ ಮಾಡುವ ಮೊದಲು, ಪ್ರವಾಹವು ಚುಂಗ್‌ಥಾಂಗ್‌ನಲ್ಲಿ ತೀಸ್ತಾ ಅಣೆಕಟ್ಟನ್ನು ಸೀಳಿಕೊಂಡು ಅಪಾರ ನಾಶವನ್ನು ಉಂಟುಮಾಡಿತು. ಇದರಿಂದಾಗಿ 23 ಸೇನಾ ಸಿಬ್ಬಂದಿ ಸೇರಿದಂತೆ ಸ್ಥಳೀಯರು ಅಸುನೀಗಿದರು. 15 ಸೇತುವೆಗಳು ಕೊಚ್ಚಿಹೋದವು.

ಪರಿಸರ ಹಿತವನ್ನು ಮನಸ್ಸಿನಲ್ಲಿ ಇರಿಸಿಕೊಳ್ಳದೇ ಹೋದರೆ ಅದೇ ನಮಗೆ ಪಾಠ ಕಲಿಸುತ್ತದೆ. ಪರ್ವತಗಳು ತಮ್ಮ ಮೇಲಿನ ಮಾನವರ ಆಕ್ರಮಣದಿಂದಾಗಿ ಕಳೆದುಕೊಂಡಿರುವ ಸಮತೋಲನವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿವೆ. ಈ ಹೋರಾಟದಲ್ಲಿ ಮನುಷ್ಯ ಗೆದ್ದರೂ ಕ್ಷಣಿಕ. ಅಂತಿಮ ಜಯವನ್ನು ಪಡೆಯುವುದು ಪ್ರಕೃತಿ ಎಂಬುದನ್ನು ಸರ್ಕಾರಗಳು ಅರಿತುಕೊಂಡರೆ ಒಳಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X