ಮಹಿಳೆಯೊಂದಿಗೆ ವಿವಾಹೇತರ ಸಂಬಂಧಕ್ಕೆ ಅಡ್ಡಿ ಮಾಡುತ್ತಿದ್ದನೆಂದು ಆಕೆಯ ಪತಿಯನ್ನು ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರಿನ ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಬ್ರೇಜ್ ಪಾಷಾ ಕೊಲೆಯಾದ ದುರ್ದೈವಿ. ಶಬ್ಬೀರ್ ಬಂಧಿತ ಆರೋಪಿ. ತಬ್ರೇಜ್ ಪಾಷಾ ಮತ್ತು ಶಬ್ಬೀರ್ ಇಬ್ಬರೂ ಸಂಬಂಧಿಗಳು. ತಬ್ರೇಜ್ ಪಾಷಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಶಬ್ಬೀರ್ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದನು.
ತಬ್ರೇಜ್ ಪತ್ನಿಯ ಜತೆಗೆ ಶಬ್ಬೀರ್ ವಿವಾಹೇತರ ಸಂಬಂಧ ಹೊಂದಿದ್ದನು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಪಂಚಾಯತಿ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಆದರೂ, ಶಬ್ಬೀರ್ ವಿವಾಹೇತರ ಸಂಬಂಧ ಮುಂದುವರೆಸಿದ್ದ ಎಂದು ಹೇಳಲಾಗಿದೆ
ಈ ವಿಚಾರವಾಗಿ ಮತ್ತೆ ಇಬ್ಬರ ನಡುವೆ ಜಗಳ ನಡೆದಿತ್ತು. ಬುಧವಾರ ಮಧ್ಯಾಹ್ನ ಎಸ್.ಆರ್.ಕೆ. ಗಾರ್ಡನ್ ಬಳಿ ತಬ್ರೇಜ್ ಪಾಷಾನನ್ನು ಅಡ್ಡಗಟ್ಟಿದ ಆರೋಪಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ತಬ್ರೇಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಹತ್ಯೆ ಮಾಡಿದ ಶಬ್ಬೀರ್ ಪರಾರಿಯಾಗಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯರಿಗೆ ಲಕ್ಷಾಂತರ ರೂ. ವಂಚನೆ; ಬಂಧನ
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ತಿಲಕ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, “ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ” ಎಂದು ಹೇಳಿದರು.
ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.