- ಎಂಟನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಗೆ ಚಾಲನೆ
- 35 ಕಲ್ಲಿದ್ದಲು ಗಣಿಗಳ ಪೈಕಿ 16 ಹೊಸ ಗಣಿಗಳಿಗೆ ಅವಕಾಶ: ಸಚಿವ ಜೋಶಿ
2025-26ರ ವೇಳೆಗೆ ಕಲ್ಲಿದ್ದಲು ಆಮದು ನಿಲ್ಲಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಸಾಮೂಹಿಕ ಉತ್ಪಾದನಾ ತಂತ್ರಜ್ಞಾನ ನಿಯೋಜಿಸುವ ಮೂಲಕ ಭೂಗತ ಗಣಿಗಳಿಂದ ಕಲ್ಲಿದ್ದಲು ಉತ್ಪಾದನೆಯನ್ನು 2030 ರ ವೇಳೆಗೆ 100 ಮಿಲಿಯನ್ ಟನ್ (ಎಂಟಿ)ಗೆ ಹೆಚ್ಚಿಸಲಾಗುವುದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಕಲ್ಲಿದ್ದಲು ಸಚಿವಾಲಯ ಎಂಟನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
“ಹರಾಜು ಹಾಕಲಾಗುತ್ತಿರುವ ಗಣಿಗಳು ಕಲ್ಲಿದ್ದಲು ಹೊಂದಿರುವ ರಾಜ್ಯಗಳಾದ ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಹರಡಿಕೊಂಡಿವೆ. ಈ ಗಣಿಗಳು ಸಿಎಂಎಸ್ಪಿ ಕಾಯ್ದೆ ಮತ್ತು ಎಂಎಂಡಿಆರ್ ಕಾಯ್ದೆಯಡಿ ಬರುತ್ತವೆ. 39 ಕಲ್ಲಿದ್ದಲು ಗಣಿಗಳ ಪೈಕಿ ನಾಲ್ಕು ಗಣಿಗಳನ್ನು ಸಿಎಂಎಸ್ಪಿ/ ಎಂಎಂಡಿಆರ್ ಕಾಯ್ದೆಯಡಿ 7ನೇ ಸುತ್ತಿನ 2ನೇ ಪ್ರಯತ್ನದ ಅಡಿಯಲ್ಲಿ ನೀಡಲಾಗುತ್ತಿದೆ” ಎಂದು ಹೇಳಿದರು.
“8ನೇ ಸುತ್ತಿನಲ್ಲಿ ನೀಡಲಾಗುತ್ತಿರುವ 35 ಕಲ್ಲಿದ್ದಲು ಗಣಿಗಳ ಪೈಕಿ 16 ಹೊಸ ಗಣಿಗಳಾಗಿದ್ದು, 19 ಗಣಿಗಳನ್ನು ಹಿಂದಿನ ಹಂತಗಳಿಂದ ಹೊರತೆಗೆಯಲಾಗುತ್ತಿದೆ. ಕಲ್ಲಿದ್ದಲು ವಲಯವು ವೇಗವಾಗಿ ಬೆಳೆಯುತ್ತಿದೆ ಮತ್ತು ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುವ ಬಗ್ಗೆ ಕಲ್ಲಿದ್ದಲು ಸಚಿವಾಲಯವು ಸರಣಿ ಸುಧಾರಣೆ ಕೈಗೊಂಡಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿ ಪೂರ್ವ ತಯಾರಿ ಇಲ್ಲದೆ ಆರೋಪ ಮಾಡ್ತಿದ್ದಾರಾ?
“ವಾಣಿಜ್ಯ ಕಲ್ಲಿದ್ದಲು ಗಣಿಗಳು ಒಟ್ಟಾರೆ ಉತ್ಪಾದನೆಗೆ ಗಮನಾರ್ಹ ಕೊಡುಗೆ ನೀಡುತ್ತಿವೆ. 39 ಗಣಿಗಳನ್ನು ಹರಾಜಿಗೆ ನೀಡುವ ಮೊದಲು ವ್ಯವಸ್ಥಿತ ಸಮೀಕ್ಷೆಗಳನ್ನು ನಡೆಸಲಾಗಿದೆ. ಗಣಿಗಳಿಂದ ಕಲ್ಲಿದ್ದಲನ್ನು ತ್ವರಿತವಾಗಿ ಸ್ಥಳಾಂತರಿಸಲು, ರೈಲು ಸಂಪರ್ಕವನ್ನು ಹೆಚ್ಚಿಸಲಾಗುತ್ತಿದೆ” ಎಂದು ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ ಹೇಳಿದರು.