ಇಸ್ರೇಲ್ ಮತ್ತು ಹಮಾಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಸಾವಿರಾರು ಅಮಾಯಕರು ಸಾವಿಗೀಡಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ “ಹೊಸ ಸವಾಲುಗಳ” ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಸಂಘರ್ಷದ ಸಮಯದಲ್ಲಿ “ಸಂಯಮವನ್ನು” ಅನುಸರಿಸಿದೆ ಎಂದು ಹೇಳಿದರು.
“ನಾವು ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದೇವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಮೋದಿ ಹೇಳಿದರು.
ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗಿನ ಮಾತುಕತೆಯ ನಂತರ ಭಾರತವು ಪ್ಯಾಲೆಸ್ಟೀನಿಯಾಗೆ ಮಾನವೀಯ ನೆರವು ಕಳುಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
“ಗ್ಲೋಬಲ್ ಸೌತ್ನ ದೇಶಗಳು ಹೆಚ್ಚಿನ ಜಾಗತಿಕ ಒಳಿತಿಗಾಗಿ ಒಂದಾಗಬೇಕಾದ ಸಮಯ ಇದು” ಎಂದು ಮೋದಿ ಕರೆ ನೀಡಿದರು.
“ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರಾಂತ್ಯದಲ್ಲಿ ಮತ್ತು ಆಕ್ರಮಿತ ಸಿರಿಯನ್ ಭೂಪ್ರದೇಶದಲ್ಲಿ ವಸಾಹತು ಚಟುವಟಿಕೆಗಳನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದ ಬೆನ್ನಲ್ಲೇ ಮೋದಿ ಹೇಳಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಧಾನಸಭೆ ಚುನಾವಣೆ: ಮಧ್ಯ ಪ್ರದೇಶದಲ್ಲಿ ಶೇ.27, ಛತ್ತೀಸ್ಗಢದಲ್ಲಿ ಶೇ.19 ಮತದಾನ
ನಿರ್ಣಯದ ಪರವಾಗಿ ಮತ ಚಲಾಯಿಸಿದ 145 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ಅಮೆರಿಕಾ, ಕೆನಡಾ ಮತ್ತು ಇಸ್ರೇಲ್ ಸೇರಿದಂತೆ 7 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು ಮತ್ತು 18 ಗೈರುಹಾಜರಾದವು.
ಅಕ್ಟೋಬರ್ನಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೋರ್ಡಾನ್ನ ಕರಡು ನಿರ್ಣಯದ ಮೇಲೆ ಮತದಾನ ಕೈಗೊಂಡಿದ್ದಾಗ ಭಾರತ ದೂರವಿತ್ತು. ಈ ಸಂದರ್ಭದಲ್ಲಿ ತಕ್ಷಣದ ಮಾನವೀಯ ಒಪ್ಪಂದಕ್ಕೆ ಭಾರತ ಕರೆ ನೀಡಿತ್ತು.
‘ನಾಗರಿಕರ ರಕ್ಷಣೆ ಮತ್ತು ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಗಳನ್ನು ಎತ್ತಿಹಿಡಿಯುವುದು’ ಎಂಬ ಶೀರ್ಷಿಕೆಯ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಅದರ ಪರವಾಗಿ 120 ರಾಷ್ಟ್ರಗಳು ಮತ ಚಲಾಯಿಸಿದವು. ಅದರ ವಿರುದ್ಧ 14 ಮತ್ತು 45 ಗೈರುಹಾಜರಾಗಿದ್ದವು.
ಭಾರತವು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ಗೆ ಎರಡು-ದೇಶಗಳ ಪರಿಹಾರಕ್ಕಾಗಿ ತನ್ನ ನಿಲುವನ್ನು ಉಳಿಸಿಕೊಂಡು ಬರುತ್ತಿದೆ ಮತ್ತು ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸಲು ಪುನರುಚ್ಚರಿಸಿದೆ.