ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಪೊಲೀಸ್ ಇಲಾಖೆ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಹಚ್ಚುವಾಗ ಮುನ್ನೆಚ್ಚರಿಕೆ ವಹಿಸಿ ಜತೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶಗಳನ್ನು ಪಾಲಿಸಿ, ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಇದೀಗ ನಗರದಲ್ಲಿ ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದ 305 ಮಂದಿ ವಿರುದ್ಧ ದೂರು ದಾಖಲಾಗಿದೆ. ಹಸಿರು ಪಟಾಕಿ ಹೊರತುಪಡಿಸಿ ರಾಸಾಯನಿಕ ಪಟಾಕಿಗಳನ್ನು ಮಾರಾಟ ಮಾಡಿದವರ ವಿರುದ್ಧ 19 ಪ್ರಕರಣ ದಾಖಲಾಗಿದೆ.
ಹೆಗಡೆನಗರ, ಸಂಪಿಗೆಹಳ್ಳಿ, ಕೊರಮಂಗಲ, ಬೇಗೂರು, ಕೊತ್ತನೂರು, ಅಮೃತಹಳ್ಳಿ ಸೇರಿದಂತೆ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಸುಪ್ರೀಂ ಕೋರ್ಟ್ ಆದೇಶದಂತೆ ದೀಪಾವಳಿ ಸಮಯದಲ್ಲಿ ರಾತ್ರಿ 8 ರಿಂದ 10 ಗಂಟೆಯ ಒಳಗೆ ಪಟಾಕಿ ಸಿಡಿಸಬೇಕು ಎಂದು ಆದೇಶ ನೀಡಿತ್ತು. ಈ ನಿಯಮ ಪಾಲನೆ ಮಾಡಲು ಬೆಂಗಳೂರು ನಗರ ಪೊಲೀಸ್ ಮತ್ತು ಬಿಬಿಎಂಪಿ ಸೂಚಿಸಿತ್ತು. ನ. 10ರಿಂದ 14ರವರೆಗೆ ನಗರದಲ್ಲಿ ಹಲವೆಡೆ ಎಸಿಪಿ ನೇತೃತ್ವದ ಕಾರ್ಯಪಡೆ ಸಂಚರಿಸಿದೆ. ಅವಧಿ ಮೀರಿ ಪಟಾಕಿ ಸಿಡಿಸಿದ್ದ 305 ಮಂದಿ ವಿರುದ್ಧ ದೂರು ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೃಷಿ ಮೇಳಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ
ಪರವಾನಗಿ ಇಲ್ಲದೇ ಅಕ್ರಮವಾಗಿ ಪಟಾಕಿ ಮಾರಾಟ ಮಾಡಲಾಗುತ್ತಿತ್ತು. ಇಂಥ ಸ್ಥಳಗಳ ಮೇಲೆ ದಾಳಿ ಮಾಡಿದ ಪೊಲೀಸರು ಪಟಾಕಿ ಜಪ್ತಿ ಮಾಡಿದ್ದಾರೆ. ಜತೆಗೆ, ಪಟಾಕಿ ಮಾರುತ್ತಿದ್ದವರ 19ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.