ಎಲ್ಲ ಜಾತಿ, ಮತ, ಧರ್ಮ, ಜನಾಂಗ, ವರ್ಗ ಸೇರಿದಂತೆ ಅನೇಕ ಭಾಷಿಕರನ್ನು ಒಳಗೊಳ್ಳುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನೇಕತೆಯಲ್ಲಿ ಏಕತೆಯನ್ನು ಸಾಧಿಸುತ್ತಿದೆ. ಜೊತೆಗೆ ಕನ್ನಡವನ್ನು ಕಟ್ಟುವ ಕೈಂಕರ್ಯವನ್ನು ಅಭಿಮಾನದಿಂದ ಮಾಡುತ್ತಿದೆ. ಆರ್‌ಬಿಐನ ಕನ್ನಡಾಭಿಮಾನ ನಾಡು ಮೆಚ್ಚುವಂತದ್ದು ಎಂದು ಸಾಹಿತಿ ಬನ್ನೂರು ಕೆ.ರಾಜು ಶ್ಲಾಘಿಸಿದ್ದಾರೆ.
ಮೈಸೂರಿನಲ್ಲಿ ಆರ್‌ಬಿಐ ಮುದ್ರಣಾಲಯದ ಕನ್ನಡ ರಾಜ್ಯೋತ್ಸವ ಸಮಿತಿಯು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. “ಇಲ್ಲಿ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಉದ್ಯೋಗಿಗಳ ತನಕ ಭಾರತದ ಬಹುತೇಕ ರಾಜ್ಯಗಳ ಜನರಿದ್ದಾರೆ. ಹಲವು ಭಾಷಿಕರಿದ್ದಾರೆ. ಆರ್‌ಬಿಐ ಒಂದು ಮಿನಿ ಭಾರತವೇ ಆಗಿದೆ” ಎಂದು ಹೇಳಿದ್ದಾರೆ.
“ಪ್ರತಿಯೊಬ್ಬರಿಗೂ ಭಾಷೆಯಷ್ಟೇ ಬದುಕು ದೊಡ್ಡದು. ತಾಯಿ ಕರುಳಿನಿಂದ ಬಳುವಳಿಯಾಗಿ ಬಂದಿರುವ ಕನ್ನಡ ನುಡಿಯೆಂದರೆ ಅದೊಂದು ಮಹದದ್ಭುತ. ಅಂಥಾ ತಾಯ್ತನ ನಮ್ಮ ಮಾತೃ ಭಾಷೆ ಕನ್ನಡದಲ್ಲಿದೆ. ಹಾಗಾಗಿ ಜ್ಞಾನಕ್ಕಾಗಿ, ಅರಿವಿಗಾಗಿ, ಬದುಕಿಗಾಗಿ ಎಷ್ಟು ಭಾಷೆಗಳನ್ನು ಕಲಿತರೂ ಸರಿಯೆ ಆದರೆ ಮಾತೃ ಭಾಷೆ ಜೀವ ಮತ್ತು ಜೀವನವಾಗಬೇಕು” ಎಂದಿದ್ದಾರೆ.
“ಮಾತೃ ಭಾಷೆ ಎಂದರೆ ಅದು ನಮ್ಮ ವ್ಯಕ್ತಿತ್ವ ಹಾಗು ಅಸ್ತಿತ್ವ. ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆ ಅವರವರಿಗೆ ಮಹತ್ವದ್ದೇ ಆಗಿರುತ್ತದೆ. ಅದು ಯಾವುದೇ ಕ್ಷೇತ್ರವಿರಲಿ ಮಾತೃ ಭಾಷೆಯಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ. ವಿಶ್ವಮಾನವ ಕುವೆಂಪು ಸಹ ಜಾಗತಿಕವಾಗಿ ಮನ್ನಣೆಗಳಿಸಿದ್ದು ಮತ್ತು ವಿಶ್ವಕವಿಯಾದದ್ದು ಮಾತೃಭಾಷೆ ಕನ್ನಡದಲ್ಲಿ ಬರೆದಿದ್ದರಿಂದಲೇ” ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಆರ್‌ಬಿಐ ಹಿರಿಯ ಪ್ರಧಾನ ವ್ಯವಸ್ಥಾಪಕ ಹರ್ಷಕುಮಾರ್ ಮನ್ರಾಲ್, ಜೋಗಾ ರೆಡ್ಡಿ, ರಜನಿಕಾಂತ್, ಎಸ್.ಎಂ.ಬ್ಯಾನರ್ಜಿ, ಪ್ರಭುಕುಮಾರ್, ಎಲ್.ರವಿ, ಉಪಾಧ್ಯಕ್ಷ ಭಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಪ್ರಭು, ಕಾರ್ಯದರ್ಶಿ ತೋಟಪ್ಪ ಶೆಟ್ಟಿ, ಖಜಾಚಿ ಚೇತನ್, ಪಿ.ರಾಜಣ್ಣ, ಚಂದ್ರಶೇಖರ್, ಬಸವರಾಜು ಇನ್ನಿತರರಿದ್ದರು.