ಗುಜರಾತಿನ ಅಹಮದಾಬಾದಿನಲ್ಲಿ ನ.19ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ನಡೆಯಲಿದೆ. ಟ್ರೋಫಿ ಯಾರು ಗೆಲ್ಲುತ್ತಾರೆಂದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಕ್ರೀಡಾ ಹಬ್ಬಕ್ಕೆ ಭಾನುವಾರ ರಾತ್ರಿ ತೆರೆ ಬೀಳಲಿದೆ.
ಲಕ್ಷಕ್ಕೂ ಹೆಚ್ಚು ಮಂದಿ ಸಾಮರ್ಥ್ಯವಿರುವ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣ ಈಗಾಗಲೇ ಸಂಪೂರ್ಣವಾಗಿ ಭರ್ತಿಯಾಗಿದೆ. ಹಲವು ಕ್ರಿಕೆಟ್ ತಾರೆಗಳು, ಸಿನಿಮಾ ದಿಗ್ಗಜರಲ್ಲದೆ ಭಾರತ ಹಾಗೂ ಆಸ್ಟ್ರೇಲಿಯಾ ಪ್ರಧಾನಿಗಳು ಈ ಪಂದ್ಯವನ್ನು ವೀಕ್ಷಿಸುವ ಸಾಧ್ಯತೆಯಿದೆ.
ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಪ್ರವೇಶಿಸಿರುವ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕೂತು ನೋಡಬೇಕೆಂದು ಕ್ರೀಡಾ ಪ್ರೇಮಿಗಳು ಹಂಬಲಿಸುವುದು ಸಹಜ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಿಮಾನಯಾನ ಸಂಸ್ಥೆಗಳು ಹಾಗೂ ಹೋಟೆಲ್‌ಗಳು ಟಿಕೆಟ್ ಹಾಗೂ ಕೊಠಡಿ ಬಾಡಿಗೆಯ ಬೆಲೆಯನ್ನು ಹತ್ತು ಪಟ್ಟು ಹೆಚ್ಚಿಸಿವೆ.
ಈ ಸುದ್ದಿ ಓದಿದ್ದೀರಾ? ರಚಿನ್ ರವೀಂದ್ರ ರೀತಿ ಶ್ರೇಯಸ್ ಅಯ್ಯರ್‌ಗೂ ಕೂಡ ಇದೆ ಕರ್ನಾಟಕದ ನಂಟು
ಬೆಂಗಳೂರಿನಿಂದ ಅಹಮದಾಬಾದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಲು ಸಾಮಾನ್ಯ ವಿಮಾನಯಾನ ದರ 5 ರಿಂದ 10 ಸಾವಿರ ರೂ. ಇರುತ್ತದೆ. ಆದರೆ ನವೆಂಬರ್ 18 ಮತ್ತು 19 ರಂದು ಈ ದರವನ್ನು 30 ರಿಂದ 40 ಸಾವಿರ ರೂ.ಗಳಿಗೆ ಏರಿಸಲಾಗಿದೆ. ಇದು ಒಂದು ಬಾರಿ ತೆರಳುವ ಏಕಮುಖ ಸಂಚಾರ ದರವಾಗಿದ್ದು, ವಾಪಸ್ ಆಗಮಿಸಬೇಕೆಂದರೆ ಮುಂದಿನ ಎರಡು ದಿನಗಳಲ್ಲಿ ದರವು ಅಷ್ಟೆ ಪ್ರಮಾಣದಲ್ಲಿದೆ.
ಇದು ಬೆಂಗಳೂರಿನಿಂದ ಮಾತ್ರವಲ್ಲ ಇತರ ಮೆಟ್ರೋ ನಗರಗಳಾದ ಕೋಲ್ಕತ್ತಾ, ಮುಂಬೈ, ದೆಹಲಿ ಹಾಗೂ ಚೆನ್ನೈನಿಂದ ಕೂಡ ಟಿಕೆಟ್ ದರವನ್ನು ವಿಪರೀತ ಏರಿಸಲಾಗಿದೆ ಎಂದು ಕ್ರೀಡಾ ಪ್ರೇಮಿಗಳು ಅಳಲು ತೋಡಿಕೊಂಡಿದ್ದಾರೆ.
ಇದೇ ರೀತಿ ಅಹಮದಾಬಾದಿನ ಹೋಟೆಲ್‌ಗಳ ಬಾಡಿಗೆ ದರವನ್ನು ಹಲವು ಪಟ್ಟು ಏರಿಸಲಾಗಿದೆ. ಸಾಮಾನ್ಯವಾಗಿ ಅಹಮದಾಬಾದ್‌ನಲ್ಲಿ ಐಷಾರಾಮಿ ಹೋಟೆಲ್ ಕೊಠಡಿ ಬೆಲೆ (ಒಂದು ರಾತ್ರಿಗೆ) ಸುಮಾರು 10 ಸಾವಿರ ರೂಪಾಯಿ ಇರುತ್ತದೆ. ಆದರೆ ಸದ್ಯ ಫೋರ್ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್‌ಗಳ ಬೆಲೆಗಳು ಬೆಚ್ಚಿ ಬೀಳಿಸುವಂತಿವೆ.
ಒಂದು ಕೊಠಡಿ ಬಾಡಿಗೆಗೆ ಪಡೆಯಲು ರಾತ್ರಿಗೆ ರೂ.1 ಲಕ್ಷ ರೂ.ವರೆಗೂ ಪಾವತಿಸಬೇಕಿದೆ. ಇತರೆ ಐಷಾರಾಮಿ ಹೋಟೆಲ್ ಮಾಲೀಕರು 24 ಸಾವಿರದಿಂದ 2 ಲಕ್ಷದ 15 ಸಾವಿರ ರೂ.ವರೆಗೂ ವಸೂಲಿ ಮಾಡುತ್ತಿದ್ದಾರೆ.