ನಗರದಲ್ಲಿ ಕೃಷಿ, ಅರಣ್ಯ ಹಾಗೂ ವನ್ಯಜೀವಿ ವಿಭಾಗದಲ್ಲಿ ಜೀವ ವೈವಿಧ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿ ತಯಾರಿಸಬೇಕು ಎಂದು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಜೀವ ವೈವಿಧ್ಯ ನಿರ್ವಹಣಾ ಸಮತಿ ಸದಸ್ಯರಿಗೆ ಸೂಚಿಸಿದರು.
“ಕೃಷಿ ಕ್ಷೇತ್ರದಲ್ಲಿ ಸಂಬಂಧಪಟ್ಟ ನರ್ಸರಿಗೆ ಭೇಟಿ ನೀಡಿ ವಿಶಿಷ್ಟವಾದ ತಳಿಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಜತೆಗೆ ನಮ್ಮ ಬೆಂಗಳೂರಿನ ವಾತಾವರಣಕ್ಕೆ ತಕ್ಕಂತೆ ಬೆಳೆಯುತ್ತಿರುವ ಹೊಸ ತಳಿಗಳ ಬಗ್ಗೆ ಪಟ್ಟಿ ಮಾಡಬೇಕು. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಮರಗಳ ಬಗ್ಗೆ ಸಮೀಕ್ಷೆ ನಡೆಸಿ ಯಾವ ಮರಗಳು ವಿನಾಶದ ಅಂಚಿನಲ್ಲಿದೆ. ಯಾವ ಮರಗಳು ಹೆಚ್ಚಿವೆ ಎಂಬುದರ ಬಗ್ಗೆ ವಿವರ ಪಡೆಯಬೇಕು” ಎಂದು ಹೇಳಿದರು.
“ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಅಪಾಯದ ಅಂಚಿನಲ್ಲಿರುವ ಪಕ್ಷಿಗಳು ಹಾಗೂ ವಿಶಿಷ್ಟ ಜೀವಿಗಳ ಬಗ್ಗೆ ಸಮಿಕ್ಷೆ ನಡೆಸಿ ಅದರ ಉಳಿವಿಗಾಗಿ ಬೇಕಾಗುವ ಎಲ್ಲ ರೀತಿಯ ಕ್ರಮಗಳ ಬಗ್ಗೆ ಸಂಪೂರ್ಣ ವಿವರ ನೀಡಬೇಕು”ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಿದ್ದಪಡಿಸಿರುವ ಜನತಾ ಜೀವ ವೈವಿಧ್ಯ ದಾಖಲಾತಿಯನ್ನು ಪುನರ್ವಿಮರ್ಶಿಸಿ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ನವೀಕರಿಸಲು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತಗಾರರಾದ ರಾಕೇಶ್ ಸಿಂಗ್ ರವರು ಅಧಿಕಾರಿಗಳಿಗೆ ಸೂಚಿಸಿದರು.
ಜೀವ ವೈವಿದ್ಯ ದಾಖಲಾತಿಗೆ ಸಂಬಂಧಿಸಿದಂತೆ ನ.17 ರಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಿತು. ಈ ವೇಳೆ, ಮಾತನಾಡಿದ ಅವರು, “ಜೀವವೈವಿದ್ಯ ಉಳಿಸುವ ಅಂಗವಾಗಿ ಯಾವುದು ಯಶಸ್ಸು ಕಂಡಿದೆ. ಅದನ್ನು ದಾಖಲಿಸುವಂತಹ ಕೆಲಸವಾಗಬೇಕು. ಬೆಂಗಳೂರಿನಲ್ಲಿರುವ ಪಾರಂಪರಿಕವಾಗಿ ಇರುವಂತಹ ಜಾಗಗಳು, ಹಸಿರು ವನಗಳ ಬಗ್ಗೆ ಸಮಿಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಕ್ರಮಬದ್ಧವಾಗಿ ಜೀವ ವೈವಿಧ್ಯ ನಿರ್ವಹಣೆಗೆ ಬೇಕಾಗುವ ಎಲ್ಲ ಅಗತ್ಯ ಸೌಲಭ್ಯವನ್ನು ಪಾಲಿಕೆ ಒದಗಿಸಲಿದೆ” ಎಂದು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಡೀಪ್ಫೇಕ್ ವಿಡಿಯೋದಲ್ಲಿ ಬಾಲಿವುಡ್ ನಟಿ ಕಾಜೋಲ್: ವಿಡಿಯೋ ವೈರಲ್
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
1. 2020ನೇ ಸಾಲಿನಲ್ಲಿ ಪ್ರಕಟಿಸಿರುವ ಜನತಾ ಜೀವ ವೈವಿಧ್ಯ ದಾಖಾಲಾತಿಯನ್ನು ಪುನರ್ವಿಮರ್ಶಿಸಿ ಸಲಹೆ ಸೂಚನೆಗಳನ್ನು ಸ್ವೀಕರಿಸಿ ನವೀಕರಿಸುವುದು.
2. ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವವೈವಿಧ್ಯತೆ ಉಳಿಸಲು ಕಾರ್ಯತಂತ್ರ ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದು.
3. ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವ ವೈವಿಧ್ಯತೆ ಉಳಿಸಲು ಹಾಗೂ ಜನತಾ ಜೀವ ವೈವಿಧ್ಯತೆ ದಾಖಾಲಾತಿ ನವೀಕರಿಸಲು ಆಸಕ್ತ ಸ್ವಯಂಸೇವಕರನ್ನು ಒಳಗೊಂಡ ತಂಡ ರೂಪಿಸುವುದು.
ಸಭೆಯಲ್ಲಿ ಅರಣ್ಯ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ.ಜಿ.ಎಲ್.ಸ್ವಾಮಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್, ಸಮಿತಿಯ ಸದಸ್ಯರುಗಳಾದ ಅಕ್ಷಯ್ ಹೆಬ್ಲಿಕರ್, ಡಾ.ನಂದಿನಿ.ಎನ್. ಡಾ. ಉಷಾ ಆನಂದಿ, ವಿಜಯ್ ನಿಶಾಂತ್, ಭಾರ್ಗವ್.ಆರ್ ಸೇರಿದಂತೆ ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.