ತುಮಕೂರು ತಾಲೂಕು ತಹಶೀಲ್ದಾರ್ ಸಿದ್ದೇಶ್ ಅವರನ್ನು ಒಳಗೊಂಡಂತೆ ಗೂಳೂರು ಹೋಬಳಿ ರಾಜಸ್ವ ನಿರೀಕ್ಷಕ ಕುಮಾರ್, ರಮೇಶ್ ಕುಮಾರ್ ಹಾಗೂ ಕೌತಮಾರನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಭವ್ಯ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ಕಾಯಿದೆಯಡಿ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ ಯಲ್ಲಪ್ಪ ಎಂಬುವವರು ಪೊಲೀಸ್ ಉಪಾಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.
ಅಧಿಕಾರಿಗಳ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ಕೌತಮಾರನಹಳ್ಳಿ ರೈತ ಯಲ್ಲಪ್ಪ
ತುಮಕೂರು ಡಿವೈಎಸ್‌ಪಿಗೆ ನೀಡಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
“ಗೌರಿಪುರ ಸರ್ವೆ ನಂ.5ರಲ್ಲಿ ಸರ್ಕಾರವು 1988ರಲ್ಲಿ ತನ್ನ ಹೆಸರಿಗೆ ಸಾಗುವಳಿ ಪತ್ರ ನೀಡಿ 1.16 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಇದೇ ಸರ್ವೆ ನಂಬರ್‌ನಲ್ಲಿ ಇತರೆ ಹಿಡುವಳಿದಾರರ ಹೆಸರು ಜಂಟಿ ಪಹಣಿಯಲ್ಲಿ ನಮೂದಾಗಿದ್ದು, ಈವರೆಗೂ ತನ್ನ ಜಮೀನು ದುರಸ್ತಿಯಾಗಿರುವುದಿಲ್ಲ. ಸರಿಪಡಿಸಿಕೊಂಡುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಅಲೆದಾಡುಸುತ್ತಿದ್ದಾರೆ. ಆದ್ದರಿಂದ ಆ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯಿದೆಯಡಿ ದೂರು ಸಲ್ಲಿಸುತ್ತಿದ್ದೇನೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ನ. 26ರಿಂದ 28ರವರೆಗೆ ಆಹೋರಾತ್ರಿ ಧರಣಿ
“ಅಧಿಕಾರಿಗಳು ಜಮೀನು ದುರಸ್ತಿ ಮಾಡಿಕೊಡುತ್ತಿಲ್ಲ. ಜಮೀನು ದುರಸ್ತಿಗಾಗಿ ವರ್ಷದಿಂದ ಅಲೆದಾಟ ನಡೆಸುತ್ತಿದ್ದೇನೆ. ಕೂಲಿ ಕೆಲಸ ಬಿಟ್ಟು ನಿತ್ಯ ಕಚೇರಿಗೆ ಅಲೆದರೂ ಕೆಲಸ ಮಾಡಿಕೊಡುತ್ತಿಲ್ಲ” ಎಂದು ರೈತ ಯಲ್ಲಪ್ಪ ಹೇಳಿದ್ದಾರೆ.