ಪಾರ್ಟಿ ಮಾಡುತ್ತಿದ್ದಾಗ ಮಾತಿನ ನಡುವೆ ಕಿಚಾಯಿಸಿದ್ದಕ್ಕೆ ಸ್ನೇಹಿತನನ್ನೆ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಲಕ್ಷ್ಮಣ್ ಮಾಂಜಿ (22) ಹತ್ಯೆಯಾದ ವ್ಯಕ್ತಿ. ಜಗದೇವ್ ಮತ್ತು ಚಂದನ್ ಕುಮಾರ್ ಬಂಧಿತರು. ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಲಸನಹಳ್ಳಿಯ ಖಾಲಿ ಜಾಗದ ಪೊದೆಗಳ ನಡುವೆ ನ.16 ರಂದು ಶವ ಪತ್ತೆಯಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ಕೊಲೆಯಾದ ಮಾಂಜಿ ಮತ್ತು ಇಬ್ಬರು ಆರೋಪಿಗಳು ಬೆಂಗಳೂರಿಗೆ ಕೂಲಿ ಕೆಲಸ ಅರಸಿ ಬಂದಿದ್ದರು. ನಗರದ ಭೈರತಿಯಲ್ಲಿ ವಾಸವಾಗಿದ್ದರು. ಈ ಮೂವರು ಮೂಲತಃ ಜಾರ್ಖಂಡದವರು.
ಕೊಲೆಯಾದ ಲಕ್ಷ್ಮಣ ಯಾವಾಗಲೂ ಮಾತಿನ ನಡುವೆ ಗೆಳೆಯರ ಕಾಲು ಎಳೆದು ಮಾತಾಡುವ ಸ್ವಭಾವ ಹೊಂದಿದ್ದನು. ನ.16 ರಂದು ಮೂವರು ಸ್ನೇಹಿತರು ಸೇರಿ ಪಾರ್ಟಿಗೆ ಮಾಡುತ್ತಿದ್ದರು.
ಈ ವೇಳೆ, ಲಕ್ಷ್ಮಣ ಇಬ್ಬರು ಸ್ನೇಹಿತರನ್ನು ಕಿಚಾಯಿಸಿದ್ದನು. ಈ ವಿಚಾರವಾಗಿ ಮೂವರ ನಡುವೆ ಜಗಳವಾಗಿತ್ತು. ಬಳಿಕ, ಆರೋಪಿಗಳು ಲಕ್ಷ್ಮಣನನ್ನು ಖಾಲಿ ಜಾಗವೊಂದಕ್ಕೆ ಕರೆದುಕೊಂಡು ಹೋಗಿ ಇಟ್ಟಿಗೆಯಿಂದ ಆತನ ತಲೆಗೆ ಹೊಡೆದು ಕೊಲೆ ಮಾಡಿ ಜಾರ್ಖಂಡ್‌ಗೆ ಪರಾರಿಯಾಗಲು ಯತ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶುಲ್ಕ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಗೆ ಕಾರು ಗುದ್ದಿದ ಚಾಲಕ
ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಕೊತ್ತನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶ್ವಥ್ ನಾರಾಯಣಸ್ವಾಮಿ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ರೈಲಿನ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದ ಜಗದೇವ್ ಹಾಗೂ ಚಂದನ್ ಕುಮಾರ್ನನ್ನು ಬಂಧಿಸಿದೆ.