ವಸತಿ ನಿಲಯದ ಅಡುಗೆ ಸಿಬ್ಬಂದಿ ಮತ್ತು ಅಧಿಕಾರಿಗಳ ಅವ್ಯವಸ್ಥೆಯನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿಜಯಪುರ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಈ ವೇಳೆ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಅಕ್ಷಯ್ ಕುಮಾರ ಅಜಮನಿ, ‘ವಿಜಯಪುರ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ, ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನೀಲಯದ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ ಮತ್ತು ದುರ್ನಡತೆ ತೋರಿದ್ದಾರೆ’ ಎಂದರು.
‘ಒಂದು ವಾರ ವಿದ್ಯಾರ್ಥಿಗಳಿಗೆ ಅಡುಗೆ ಮಾಡದೇ ಉಪವಾಸ ಇರುವ ಹಾಗೆ ಮಾಡಿದ್ದಾರೆ. ಮೊದಲೂ ಅದೇ ವಸತಿ ನಿಲಯದಲ್ಲಿ ಇದ್ದ ಹುಲಗಪ್ಪ ಛಲವಾದಿ ಎಂಬ ಹೊರಗುತ್ತಿಗೆ ನೌಕರನನ್ನು ಹಲವು ಆರೋಪಗಳ ಮೇಲೆ ಬೇರೆ ವಸತಿ ನಿಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದ್ದರಿಂದ ಅವರು ದುರುದ್ದೇಶ ಇಟ್ಟುಕೊಂಡು ವಸತಿ ನಿಲಯಕ್ಕೆ ನುಗ್ಗಿ ಅಡುಗೆ ಮಾಡುತ್ತಿರುವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಬೆದರಿಸಿ ನಿಲಯದಿಂದ ಅಡುಗೆ ಮಾಡುವವರನ್ನು ಕರೆದುಕೊಂಡು ಹೋಗಿ, ವಿದ್ಯಾರ್ಥಿಗಳಿಗೆ ಊಟ ಇಲ್ಲದ ಹಾಗೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಪಂದನೆ ನೀಡದೆ, ಯಾವುದೇ ಪರಿಶೋಧನೆ ಮಾಡದೆ ಬೇಜವಾಬ್ದಾರಿ ತೋರಿದ್ದಾರೆ. ಈ ಘಟನೆಗೆ ಕಾರಣರಾದ ಹುಲಗಪ್ಪ ಛಲವಾದಿ, ಲಕ್ಷ್ಮೀ ಛಲವಾದಿ, ಯಲ್ಲಮ್ಮ, ಜುಲೇಖಾ ಎಂಬ ಮೂರು ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿರ್ವಹಿಸದೆ, ಪದೆ ಪದೆ ವಿದ್ಯಾರ್ಥಿಗಳಿಗೆ ಕಿರುಕುಳ ಮತ್ತು ಹಿಂಸೆ ನೀಡುತ್ತಿದ್ದಾರೆ. ಇವರನ್ನು ಕೆಲಸದಿಂದ ವಜಾ ಮಾಡಿ ಬೇರೆ ಸಿಬ್ಬಂದಿಯನ್ನು ಅಯ್ಕೆ ಮಾಡಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಿ. ಹಾಗೆಯೇ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನ ಈಡೇರಿಸಬೇಕು’ ಎಂದು ವಿಜಯಪುರ ಜಿಲ್ಲಾಧಿಕಾರಿಗಳಿಗೆ ದಲಿತ ವಿದ್ಯಾರ್ಥಿ ಪರಿಷತ್ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಸಯ್ಯದ್ ಸುಬೇದಾರ್, ದೀಪಕ್, ಸತೀಶ್ ಇಮ್ಮನದ, ಮುತ್ತು ಛಲವಾದಿ, ಸಲೀಂ ಅಹ್ಮದ್, ಸತೀಶ್ ಅಂಜುಟಗಿ ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು.