ಗುಂಡ್ಲುಪೇಟೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು 2023ರ ಕಲೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಚಾಮರಾಜನಗರ ಜಿಲ್ಲಾ ಪಂಚಾಯತ್, ಗುಂಡ್ಲುಪೇಟೆ ತಾಲೂಕು ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಗುಂಡ್ಲುಪೇಟೆ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳ ಕಚೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ, ಪಟ್ಟಣದ ಮದ್ದಾನೇಶ್ವರ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಜರುಗಿತು.
ಈ ವೇಳೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಮ್ಮ ತಾಲೂಕಿಗೆ ಅತಿ ಹೆಚ್ಚು ಅತಿಥಿ ಶಿಕ್ಷಕರನ್ನು ನಮ್ಮ ಶಾಸಕರು ನೀಡಿದ್ದಾರೆ. ನಮ್ಮ ಸರ್ಕಾರಿ ಶಾಲೆಯ ಕೊರತೆ ಇರುವ ಕಡೆಗೆ ಹೆಚ್ಚು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಮಕ್ಕಳು ಹೆಚ್ಚು ಪ್ರತಿಭಾವಂತರಾಗಬೇಕು ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳು ಪ್ರತಿಯೊಬ್ಬರೂ ಅವರ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಮುಂದೆ ಬರಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಮ್. ಗಣೇಶ್ ಪ್ರಸಾದ್, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಈ ಕಾರ್ಯಕ್ರಮವನ್ನು ರೂಪಿಸಿದಕ್ಕೆ ತುಂಬಾ ಖುಷಿಯಾಗಿದೆ. ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ. ಸಾಕಷ್ಟು ಪ್ರತಿಭಾವಂತರು ಸರ್ಕಾರಿ ಶಾಲೆಯಿಂದ ಬಂದವರು. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ. ಪ್ರತಿಯೊಂದು ಗ್ರಾಮದಲ್ಲಿ ಸರ್ಕಾರಿ ಶಾಲೆ ಇದೆ. ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಪ್ರತಿಭಾವಂತರಾಗಬೇಕು. ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಮಕ್ಕಳು ತುಂಬಾ ಪ್ರತಿಭಾವಂತರಿದ್ದಾರೆ. ಈಗಿನ ಶಿಕ್ಷಣಕ್ಕೂ ಹಿಂದಿನ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದೆ’ ಎಂದರು.
ಇದೇ ವೇಳೆ ಶಾಸಕರು, ‘ಮಹಿಳೆಯರ ಸಬಲೀಕರಣಕ್ಕೆ ತಾಲೂಕಿಗೆ ಒಂದು ಗಾರ್ಮೆಂಟ್ಸ್ ಉದ್ಯಮದ ಒಂದು ಹಂತದ ಮಾತುಕತೆ ಆಗಿದೆ. ತೆರಕಣಾಂಬಿ ಡಿಗ್ರಿ ಕಾಲೇಜಿನ ಸಮಸ್ಯೆ ಮುಂದಿನ ಸೋಮವಾರ ತೀರ್ಮಾನವಾಗುತ್ತದೆ’ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ನಮ್ಮ ತಾಲೂಕಿಗೆ ಹೆಚ್ಚಿನ ಕೀರ್ತಿ ತರಬೇಕು ಎಂದು ಶಿಕ್ಷಕರುಗಳಿಗೆ ತಿಳಿಸಿದರು. ‘ನಾನು ಐದು ವರ್ಷ ಶಾಸಕರಾಗಿ ನಿಮ್ಮ ಜೊತೆ ಸದಾ ಇರುತ್ತೇನೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ರಾಮಚಂದ್ರ ರಾಜೆ ಅರಸ್, ಪುರಸಭೆ ಮುಖ್ಯ ಅಧಿಕಾರಿ ವಸಂತ್ ಕುಮಾರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್, ಜಿಲ್ಲಾಧ್ಯಕ್ಷ ಮಹೇಶ್ ಗುರುಪ್ರಸಾದ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಟಿ. ಸರೋಜಮ್ಮ ಇನ್ನಿತರರು ಉಪಸ್ಥಿತರಿದ್ದರು.