ವೈಜ್ಞಾನಿಕ ಯುಗದಲ್ಲಿ ಚಂದ್ರಯಾನ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದ್ದರೂ ಮಹಿಳೆಯರ ಮೇಲಿನ ಕೀಳಿರಿಮೆ ಕಡಿಮೆಯಾಗಿಲ್ಲ ಎಂದು ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟ(ಎನ್‌ಎಫ್‌ಐಡಬ್ಲ್ಯೂ) ರಾಜ್ಯಾಧ್ಯಕ್ಷೆ ಎ ಜ್ಯೋತಿ ಅಸಮಾಧಾನಪಟ್ಟರು.
ದಾವಣಗೆರೆಯಲ್ಲಿ ಪಂಪಾಪತಿ ಭವನದಲ್ಲಿ ನಡೆದ ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
ಹೆಣ್ಣನ್ನು ಸ್ವಚ್ಛವಾಗಿ ಕಾಣುವ ಸಮಾಜವನ್ನು ಖಂಡಿಸಿದ ಅವರು, “ಹೆಣ್ಣು ಮಕ್ಕಳು ಎಲ್ಲ ಸ್ತರಗಳಲ್ಲಿ ಮುಂದೆ ಬಂದಿದ್ದಾರೆ. ಕ್ರೌರ್ಯ, ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಪಿಡುಗು ಮುಂತಾದ ಕ್ರಿಯೆಗಳು ಸಮಾಜದಲ್ಲಿ ನಡೆಯುತ್ತಿದ್ದರೂ ಸರ್ಕಾರ ಇವುಗಳ ವಿರುದ್ಧವಾಗಿ ಕ್ರಮ ತೆಗೆದುಕೊಳ್ಳದೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸ್ತ್ರೀಯರ ಬಗ್ಗೆ ಮನುವಾದ ಹೆಣ್ಣು ಮಕ್ಕಳಿಗೆ ಯಾವುದೇ ಸ್ವಾತಂತ್ರವನ್ನು ಕೊಡಬಾರದು ಎನ್ನುವ ಉದ್ದೇಶ ಹೊಂದಿದ್ದರೂ ಅದನ್ನು ಮೀರಿ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಬದುಕಲು ಯತ್ನಿಸುತ್ತಿದ್ದಾರೆ” ಎಂದರು.
“ಜನಪ್ರತಿನಿಧಿಗಳ ಆಯ್ಕೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ತರಬೇಕೆನ್ನುವುದರಲ್ಲಿ ಭಾರತೀಯ ಮಹಿಳಾ ಒಕ್ಕೂಟ ಪ್ರಮುಖ ಪಾತ್ರವಹಿಸಿದೆ. ಸುಪ್ರೀಂ ಕೋರ್ಟ್ ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ತರಬೇಕೆನ್ನುವ ಸೂಚನೆ ಕೊಡುತ್ತಿದ್ದಂತೆ ವಿಶೇಷ ಅಧಿವೇಶನ ಕರೆದು ತರಾತುರಿಯಲ್ಲಿ ಪಾರ್ಲಿಮೆಂಟಿನಲ್ಲಿ ತೀರ್ಮಾನ ತೆಗೆದುಕೊಂಡ ಬಿಜೆಪಿ ಸರ್ಕಾರ 2029ಕ್ಕೆ ಮಹಿಳಾ ಮೀಸಲಾತಿ ತರುವುದಾಗಿ ಹೇಳಿರುವುದು ಖಂಡನೀಯ. ಬರುವ ಲೋಕಸಭಾ ಚುನಾವಣೆಗೆ ಮುನ್ನವೇ ಮಹಿಳಾ ಮೀಸಲಾತಿಯನ್ನು ಘೋಷಿಸಬೇಕು” ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
“ಎನ್‌ಎಫ್‌ಐಡಬ್ಲ್ಯೂ ಸಂಘಟನೆಯು ಮಹಿಳಾ ಸ್ವಾತಂತ್ರ್ಯ, ಮಹಿಳೆಯರ ಸ್ವಾವಲಂಬನೆಗಾಗಿ ಹೋರಾಟ ಮಾಡಬೇಕಾಗಿದೆ” ಎಂದು ಹೇಳಿ ಹೆಣ್ಣನ್ನು ಎರಡನೇ ದರ್ಜೆ ಪ್ರಜೆಯಾಗಿ ನೋಡುತ್ತಿರುವ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೂಡಲೇ ಸಾರಾಯಿ ಅಂಗಡಿಗಳನ್ನು ಬಂದ್ ಮಾಡಿ; ಮಹಿಳೆಯರ ಮನವಿ
ಎನ್‌ಎಫ್‌ಐಡಬ್ಲ್ಯೂ ಬೆಂಗಳೂರು ಜಿಲ್ಲಾಧ್ಯಕ್ಷೆ ದಿವ್ಯ ಬಿರಾದಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್ ಜಿ ಉಮೇಶ್, ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಮುಖಂಡರಾದ ಟಿಎಸ್ ನಾಗರಾಜ್, ಮಹಮ್ಮದ್ ಭಾಷಾ, ಚೆನ್ನಮ್ಮ, ಸುಶೀಲಮ್ಮ, ಎಸ್ ಎಸ್ ಮಲ್ಲಮ್ಮ, ಸರೋಜಾ, ಸರೋಜಮ್ಮ ಇದ್ದರು.