ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಮತ್ತು ಕಾಡುಗೊಲ್ಲರಿಗೆ ಕಾಡುಗೊಲ್ಲ ಎಂದು ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ, ಗುಬ್ಬಿ ಪಟ್ಟಣದ ತಾಲೂಕು ಕಚೇರಿಯ ಮುಂದೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಕಾಡುಗೊಲ್ಲರ ಸಂಘದ ತಾಲೂಕು ಅಧ್ಯಕ್ಷ ದೇವರಾಜು ಮಾತನಾಡಿ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡ ಮೀಸಲು ಪಟ್ಟಿಗೆ ಸೇರಿಸಬೇಕು. ಕಾಡುಗೊಲ್ಲರಿಗೆ ಕಾಡುಗೊಲ್ಲ ಎಂದು ಜಾತಿ ಪ್ರಮಾಣ ಪತ್ರ ನೀಡಬೇಕು. ಕಾಡುಗೋಲ್ಲ ಸಮುದಾಯದ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾಡುಗೊಲ್ಲರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಗುಡ್ದದಹಳ್ಳಿ ಬಸವರಾಜು ಮಾತನಾಡಿ, ಶತಮಾನಗಳಿಂದಲೂ ಕಾಡುಗೊಲ್ಲರು ಹೋರಾಟ ಮಾಡುತ್ತಾ ಬಂದಿದ್ದು, ಸರ್ಕಾರ ಕಾಡುಗೊಲ್ಲರಿಗೆ ಯಾವುದೇ ಮನ್ನಣೆ ನೀಡಿಲ್ಲ. ಈ ಹಿಂದಿನ ಸರ್ಕಾರ ನೆಪಮಾತ್ರಕ್ಕೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿತ್ತು. ಆದರೆ, ಸಮುದಾಯದ ಜನರಿಗೆ ಯಾವುದೇ ಸೌಲಭ್ಯ ದೊರಕಿಲ್ಲ, ಲೋಕಸಭಾ ಚುನಾವಣೆ ಬರುವುದರೂಳಗೆ ಕಾಡುಗೊಲ್ಲರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು. ಸರ್ಕಾರ ಕ್ರಮ ಕೈಗೊಳ್ಳದೆ ಹೋದರೆ ಕಾಡುಗೊಲ್ಲರನ್ನು ಸಂಘಟಿಸಿ ವಿಧಾನಸೌಧ ಚಲೋ ಮತ್ತು ದೆಹಲಿ ಚಲೋ ನಡೆಸಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕವೀರಯ್ಯ ಮಾತನಾಡಿ ಕಾಡುಗೂಲ್ಲ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಳ್ಳದಕ್ಕೆ ಸೀಮಿತಗೊಳಿಸದೆ ನ್ಯಾಯಯುತವಾಗಿ ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಡುಗೂಲ್ಲ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಈರಣ್ಣ, ಯರಪ್ಪ, ತಿಮ್ಮಯ್ಯ, ಚಿಕ್ಕವೀರಯ್ಯ ಕಕ್ಕೆನಹಳ್ಳಿ ಮಂಜಣ್ಣ, ಉಮೇಶ್, ಸದಾಶಿವು, ಮಹಾಲಿಂಗಯ್ಯ, ಶ್ರೀನಿವಾಸ್, ತೀರ್ಥಪ್ರಸಾದ್, ಸಮುದಾಯದ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.