ಜಗಳ ಬಿಡಿಸಲು ಬಂದ ಪೊಲೀಸರ 112 ವಾಹನವನ್ನೇ ಕದ್ದೊಯ್ದು ಪೊಲೀಸರನ್ನು ಹೈರಾಣು ಮಾಡಿರುವ ಪ್ರಕರಣ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು, ಸಿ.ಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾನಹಳ್ಳಿಯಲ್ಲಿ ಸಂಭವಿಸಿದ್ದು, ಮುನಿಯ ಎಂಬಾತ ಪೊಲೀಸರ ವಾಹನ ಹೊತ್ತೊಯ್ದಿದ್ದಾನೆ.
ಸೋಮವಾರ ರಾತ್ರಿ ಇಲ್ಲಿನ ಮುನಿಯ ಮತ್ತು ಆತನ ಸಹೋದರನ ನಡುವೆ ಜಗಳ ನಡೆಯುತ್ತಿತ್ತು. ಆಗ ಮುನಿಯನ ಸಹೋದರ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದಾನೆ. ಸ್ಥಳಕ್ಕೆ ಬಂದ 112 ಪೊಲೀಸರು ಜಗಳ ಬಿಡಿಸಿ ಮುನಿಯನಿಗೆ ತಿಳಿ ಹೇಳಿದ್ದಾರೆ.
ಇದರಿಂದ ಕುಪಿತಗೊಂಡ ಮುನಿಯ ಪೊಲೀಸರು ಬಂದಿದ್ದ 112 ವಾಹನದ ಹಿಂಬದಿಯ ಗಾಜು ಹೊಡೆದು ಹಾಕಿದ್ದಾನೆ. ಪೊಲೀಸರು ಕಾರಿನಿಂದ ಇಳಿದು ಗಾಜು ಪರಿಶೀಲನೆ ಮಾಡುತ್ತಿದ್ದಾಗ. ಏಕಾಏಕಿ ಕಾರು ಹತ್ತಿದ ಮುನಿಯ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ತಾಂತ್ರಿಕ ಸಮಸ್ಯೆಯಿಂದ ʼಗೃಹಲಕ್ಷ್ಮಿ ಯೋಜನೆʼಗೆ ತೊಂದರೆ: ಯತೀಂದ್ರ ಸಿದ್ದರಾಮಯ್ಯ
ಈ ಅನಿರೀಕ್ಷಿತ ಘಟನೆಯಿಂದ ಕಕ್ಕಾಬಿಕ್ಕಿಯಾದ ಪೊಲೀಸರು ಇಡೀ ರಾತ್ರಿ ಮುನಿಯ ಹಾಗೂ 112 ವಾಹನವನ್ನು ಹುಡುಕಿದ್ದಾರೆ. ಕೊನೆಗೆ ಸತತ ಮೂರ್ನಾಲ್ಕು ಗಂಟೆಗಳ ಹುಡುಕಾಟದ ಬಳಿಕ ತುಮಕೂರು ತಾಲೂಕಿನ ಹೆಬ್ಬೂರು ಬಳಿ ವಾಹನ ಸಮೇತವಾಗಿ ಮುನಿಯ ಪತ್ತೆಯಾಗಿದ್ದಾನೆ. ಕೊನೆಗೂ ಮುನಿಯನನ್ನು ಪತ್ತೆ ಮಾಡಿದ ಪೊಲೀಸರು 112 ವಾಹನವನ್ನು ಸುಪರ್ದಿಗೆ ಪಡೆದು, ಮುನಿಯನನ್ನು ವಶಕ್ಕೆ ಪಡೆದಿದ್ದಾರೆ.