ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಸ್ಥಳೀಯರು ಉಡುಪಿ ಜಿಲ್ಲೆಯ ಕುಂದಾಪುರ ಸರ್ಕಾರಿ ಆಸ್ಪತ್ರೆ ಎದುರು ಆಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
“ನವೆಂಬರ್ 17ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಗಂಗೊಳ್ಳಿ ಮೂಲದ ಶ್ರೀನಿವಾಸ ಖಾರ್ವಿ ಅವರ ಹೆಂಡತಿ ಜ್ಯೋತಿ ಅವರು ದಾಖಲಾಗಿದ್ದರು. ಸೋಮವಾರ ಬೆಳಿಗ್ಗೆ ಹೆರಿಗೆ ಮಾಡಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
“ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಬೇಕು, ಡಿಸಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬರಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
“ಹೊಕ್ಕುಳ ಬಳ್ಳಿ ಸುತ್ತಿಕೊಂಡು ಮಗು ಮೃತಪಟ್ಟಿರುವುದಾಗಿ ವೈದ್ಯರು ಉಡಾಫೆಯಾಗಿ ಮಾತನಾಡಿದ್ದಾರೆ. ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವವಿದೆ ಎಂದರೂ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ” ಎಂದು ಆರೋಪಿಸಿ ಎಂಟೂವರೆ ತಿಂಗಳಿನಿಂದ ಸ್ಕ್ಯಾನಿಂಗ್ ಮಾಡಲು ಒಪ್ಪದ ಡಾಕ್ಟರ್ ವಿರುದ್ಧ ಮನೆಯವರು ಆಕ್ರೋಶ ಹೊರ ಹಾಕಿದ್ದು, ಇಡೀ ರಾತ್ರಿ ಕುಂದಾಪುರ ಸರ್ಕಾರಿ ಆಸ್ಪತ್ರೆೆ ಎದುರು ಪ್ರತಿಭಟನೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಾಲಾ ಶೈಕ್ಷಣಿಕ ಪ್ರವಾಸ, ಮದುವೆಗಳಿಗಿಲ್ಲ ಸಾರಿಗೆ ಬಸ್‌ಗಳು
ಇನ್ನು ಸ್ಥಳಕ್ಕೆ ಬಂದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಕೂಡ ವೈದ್ಯರ ನಿರ್ಲಕ್ಷ್ಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಡಿಎಚ್‌ಒ, ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ, ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದು, ನುರಿತ ವೈದ್ಯರ ತಂಡ ರಚಿಸಿ ಪ್ರಕರಣದ ತನಿಖೆ ಕೈಗೊಳ್ಳುತ್ತೇವೆ. ವೈದ್ಯರ ನಿರ್ಲಕ್ಷ್ಯ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ಣಿಡಿದ್ದು, ಈ ಸದ್ಯ ಸದರಿ ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತೇವೆಂದು ತಿಳಿಸಿದ್ದಾರೆ.