ಕನಕ ಜಯಂತಿಯನ್ನು ನಿಗದಿತ ದಿನದಂದು ತಾಲೂಕು ಆಡಳಿತದಿಂದ ಸರಳವಾಗಿ ಆಚರಣೆ ಮಾಡಲಾಗುತ್ತದೆ. ನಂತರದ ದಿನದಲ್ಲಿ ಸಮಾಜ ಮತ್ತು ಸಂಘ ಸಂಸ್ಥೆಗಳ ಜೊತೆಗೂಡಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಗಣೇಶ್ ಪ್ರಸಾದ್ ಹೇಳಿದ್ದಾರೆ.
ಚಾಮನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. “ಡಿಸೆಂಬರ್ನಲ್ಲಿ ವಿಧಾನಸಭಾ ಅಧಿವೇಶನ ಇರುವುದರಿಂದ ಶೀಘ್ರದಲ್ಲಿ ಕನಕ ಜಯಂತಿ ಆಚರಣೆ ದಿನಾಂಕವನ್ನು ನಿಗದಿಗೊಳಿಸಲಾಗುವುದು. ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಎಲ್ಲಾ ಸಮುದಾಯವರ ಜೊತೆಗೂಡಿ ಆಚರಣೆ ಮಾಡಬೇಕು” ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಜಿ.ಡಿ.ಎಲ್ ಸುರೇಶ್ ಮಾತನಾಡಿ, “ಕಾರಣಂತರಗಳಿಂದ ಕಳೆದ ನಾಲ್ಕು ವರ್ಷಗಳಿಂದ ಸರಳವಾಗಿ ಕನಕ ಜಯಂತಿ ಆಚರಣೆ ಮಾಡಲಾಗಿದೆ. ಈಬಾರಿ ಸಮಾಜದ ಬೇಡಿಕೆಯಂತೆ ಅದ್ದೂರಿಯಾಗಿ ಕನಕ ಜಯಂತಿ ಆಚರಣೆ ಮಾಡಬೇಕು. ಕುರುಬ ಸಮಾಜದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕಗಳಿಸಿದ್ದಾರೆ. ಅವರಿಗೆ ಸನ್ಮಾನ ಮಾಡಲಾಗುತ್ತದೆ” ಎಂದರು.
“ಕನಕ ಭವನ ಹತ್ತು ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಇದನ್ನು ಶೀಘ್ರ ಪೂರ್ಣಗೊಳಿಸಬೇಕು” ಎಂದು ಕನಕ ಯುವ ಸಂಘಟನೆಯ ಯುವಕರು ಶಾಸಕರಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ತಹಸೀಲ್ದಾರ್ ಟಿ.ರಮೇಶ್ ಬಾಬು, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ವಿಶ್ವನಾಥ್, ಶಿವಣ್ಣ, ತಾಪಂ ಇಓ ರಾಮಲಿಂಗಯ್ಯ,ಮತ್ತು ಯಜಮಾರುಗಳು ಉಪಸ್ಥಿತರಿದ್ದರು.