ಕೊಡಗು ಜಿಲ್ಲೆಯಲ್ಲಿ ನೂತನ ಶಾಸಕರು ಆಯ್ಕೆಯಾಗಿ ಕೇವಲ ಆರು ತಿಂಗಳು ಕಳೆದಿವೆ. ಅಷ್ಟರಲ್ಲಾಗಲೇ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಜಿ ಶಾಸಕರು ಮಾತನಾಡುತ್ತಿದ್ದಾರೆ. ಅವರು ಸ್ವಲ್ಪ ಸಮಯ ತಾಳ್ಮೆ ವಹಿಸಿ, ಬಳಿಕ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಲಿ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಆರ್‌ಎಫ್ ಪರಿಹಾರ ನಿಧಿಯಡಿ ತಯಾರಿಸಲಾಗಿದ್ದ ಕಾಮಗಾರಿಗಳ ಕ್ರಿಯಾಯೋಜನೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಬದಲಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ 50ಕೋಟಿ ರೂ.ಗಳ ವಿಶೇಷ ಪ್ಯಾಕೇಜನ್ನು ತರಲಾಗಿತ್ತು. ಈ ಸಂದರ್ಭ ಮಾಜಿ ಶಾಸಕರುಗಳು ಎಲ್ಲಾ ಕಾಮಗಾರಿಗಳನ್ನು ಬದಲಿಸಿದ್ದರು. 2019ರಿಂದ 2021ರವರೆಗೆ ಮೂರು ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿರಲಿಲ್ಲ ಎಂದು ಅವರು ಆರೋಪಿಸಿದರು.
ಭಾಗಮಂಡಲದಲ್ಲಿ ಕಾಣಿಸಿಕೊಳ್ಳುವ ಪ್ರವಾಹವನ್ನು ತಪ್ಪಿಸುವ ಚಿಂತನೆಯಡಿ ಆರಂಭಿಸಿದ ಕಾವೇರಿಯ ಹೂಳೆತ್ತುವ ಕಾಮಗಾರಿಯ ಟೆಂಡರ್ ಪಡೆದವರ ಮೇಲೆ ಒತ್ರಡ ಹಾಕಿ ಟೆಂಡರ್ ಅನ್ನು ರದ್ದುಗೊಳಿಸಿದ್ದು ಯಾರೆಂದು ಮಾಜಿ ಶಾಸಕರೇ ಉತ್ತರಿಸಬೇಕು ಎಂದು ಹೇಳಿದ ಧರ್ಮಜ ಉತ್ತಪ್ಪ, ಕಾಮಗಾರಿಯ ಮರುಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಹಾರಂಗಿ ಅಣೆಕಟ್ಟು ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪಡೆದವರಿಗೆ ಈಗಾಗಲೇ ಸೂಚನೆ ನೀಡಿದ್ದು, ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ. 2012ರಲ್ಲಿ ಆರಂಭಗೊಂಡ ಸೋಮವಾರಪೇಟೆಯ ಟರ್ಫ್ ಹಾಕಿ ಮೈದಾನದ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದೀಗ ಶಾಸಕ ಡಾ.ಮಂತರ ಗೌಡ ಅವರ ಪ್ರಯತ್ನದಿಂದಾಗಿ 40 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಂಡಿದೆ. ಕಳೆದ 7-8 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಟ್ಟಡ ಕಾಮಗಾರಿ, ಕುಶಾಲನಗರ ಬಸ್ ನಿಲ್ದಾಣದ ಕಟ್ಟಡ ಹೀಗೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಆರಂಭಗೊಳ್ಳಲಿವೆ. ಲೋಕಸಭಾ ಚುನಾವಣೆ ಹತ್ತಿರ ಬಂದಾಗ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಶಾಸಕಧ್ವಯರು ಕಳೆದ ಇಪ್ಪತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಧರ್ಮಜ ಉತ್ತಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್, ವಕ್ತಾರ ಟಾಟು ಮೊಣ್ಣಪ್ಪ, ಉಪಾಧ್ಯಕ್ಷ ಅರವಿಂದ್ ಕುಟ್ಟಪ್ಪ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ.ಎನ್.ಪ್ರಥ್ಯು ಹಾಗೂ ಪ್ರಮುಖರಾದ ನರೇಂದ್ರ ಕಾಮತ್ ಉಪಸ್ಥಿತರಿದ್ದರು.