ರೈತ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಚಿತ್ರದುರ್ಗದ ಸಾಮಾಜಿಕ ಹೋರಾಟಗಾರ ಟಿ. ನುಲೇನೂರು ಶಂಕರಪ್ಪ ಅವರು ನಿಧನರಾಗಿದ್ದಾರೆ.
68 ವರ್ಷ ವಯಸ್ಸಿನ ಟಿ ನುಲೇನೂರು ಶಂಕರಪ್ಪ ಅವರು ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಸೋಮವಾರ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಶಂಕರಪ್ಪ ಅವರು ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಅಧ್ಯಕ್ಷರಾಗಿ ಹಾಗೂ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಈ ಮೊದಲು ಅವರು ರೈತ ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
ರೈತರ ಪರವಾಗಿ ಜಿಲ್ಲೆಯಲ್ಲಿ ಗಟ್ಟಿ ಧ್ವನಿಯಾಗಿದ್ದ ಶಂಕರಪ್ಪಅವರು ಭದ್ರಾ ಮೇಲ್ದಂಡೆ ಹೋರಾಟದ ಅನುಷ್ಟಾನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅತೀವೃಷ್ಟಿ, ಅನಾವೃಷ್ಟಿಗಳ ಸಂದರ್ಭದಲ್ಲಿ ರೈತರಿಗೆ ಬರ ಪರಿಹಾರ ಸೇರಿದಂತೆ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಇದಲ್ಲದೆ ಕಳೆದ 20 ವರ್ಷಗಳಿಂದ ಚಿತ್ರದುರ್ಗ ನಗರದಲ್ಲಿ ಪತ್ರಿಕಾ ವಿತರಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಶಂಕರಪ್ಪ ಅವರ ಅಗಲಿಕೆಗೆ ರಾಜ್ಯದಾದ್ಯಂತ ಹಲವರು ಕಂಬನಿ ಮಿಡಿದಿದ್ದಾರೆ. ಶಂಕರಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ.