ಬಸವಾದಿ ಶರಣರ ತತ್ವಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳನ್ನು ತಡೆಯುವುದಕ್ಕಾಗಿ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಉಪಸ್ಥಿತಿಯ ವಿಶೇಷ ಸಭೆ ನಡೆಯಿತು
ಬಸವಾದಿ ಶರಣರ ತತ್ವಗಳ ಮೇಲೆ ಮುಂದುವರಿದ ದಾಳಿಯನ್ನು ವಿರೋಧಿಸಿ ’ಕರ್ನಾಟಕ ಪ್ರಜ್ಞಾವಂತರ ಅನುಭವ ಮಂಟಪ’ ವೇದಿಕೆಯು ಹಮ್ಮಿಕೊಂಡಿದ್ದ ಸಭೆಯು ಹಲವು ಚಿಂತನ ಮಂಥನಗಳಿಗೆ ಸಾಕ್ಷಿಯಾಯಿತು.
ವೈಚಾರಿಕತೆಯ ಪ್ರತಿರೂಪವಾಗಿರುವ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಲವು ಚಿಂತಕರು, ಹೋರಾಟಗಾರರು, ಬರಹಗಾರರು ಮಾತನಾಡಿದರು. ವಿವಿಧ ಸಮುದಾಯ ಮತ್ತು ವಿವಿಧ ಸಂಘಟನೆಗಳ ಹಿನ್ನೆಲೆಯವರು ಭಾಗಿಯಾಗಿ ಅನುಭವ ಮಂಟಪ ಎಂಬ ಪರಿಕಲ್ಪನೆಯ ಮೂಲ ಆಶಯವನ್ನು ಎತ್ತಿಹಿಡಿದರು.
ಚಿಂತಕರಾದ ಸಿದ್ದನಗೌಡ ಪಾಟೀಲ ಅವರು ಮಾತನಾಡಿ, “ಅನುಭವ ಮಂಟಪದ ಸೃಷ್ಟಿಯೇ ಪಾಸಿಟಿವ್ ಆಗಿದೆ. ಇದು ಕೇವಲ ಒಂದು ಸಂದರ್ಭದ ಕ್ರಿಯೆಗೆ ಪ್ರತಿಕ್ರಿಯೆ ಇಲ್ಲ” ಎಂದು ಸ್ಪಷ್ಪಪಡಿಸಿದರು.
ವಚನಕಾರ ಚನ್ನಬಸವಣ್ಣ ಮೂರು ಮದಗಳ ಬಗ್ಗೆ ಎಚ್ಚರಿಸಿದ್ದಾನೆ. ಅರ್ಥ ಮದ, ಅಹಂಕಾರ ಮದ, ಕುಲಮದ – ಈ ಮೂರನ್ನು ಒಟ್ಟಾಗಿ ಗ್ರಹಿಸದಿದ್ದರೆ ಕಷ್ಟ. ಇಂದು ಅರ್ಥಮದವೆಂದರೆ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆ, ಅಹಂಕಾರ ಮದವೆಂದರೆ ಬಹುಮತದ ಅಧಿಕಾರಶಾಹಿತ್ವ, ಕುಲಮದವೆಂದರೆ ಭಿನ್ನ ವಿಚಾರಧಾರೆಗಳಿಗೆ ಗೌರವ ಕೊಡದಿರುವ ಕೋಮುವಾದ- ಇವುಗಳ ಕುರಿತು ಎಚ್ಚರಿಕೆ ವಹಿಸಬೇಕಿದೆ ಎಂದರು.
ಅದಾನಿ ಅಂಬಾನಿಯ ಅರ್ಥಮದದ ರಕ್ಷಣೆಗೆ ಕುಲಮದ, ಅಹಂಕಾರ ಮದ ಧಾವಿಸುತ್ತವೆ. ಈ ಮೂರು ತಲೆಯ ಹಾವನ್ನು ಏಕಕಾಲಕ್ಕೆ ಒಡೆಯಬೇಕಾಗಿದೆ ಎಂದು ಎಚ್ಚರಿಸಿದರು.
ಮನುಶಾಸ್ತ್ರದ ಪ್ರಕಾರ ಶೂದ್ರನಿಗೆ ಯಾವುದೇ ಆಚರಣೆ ಮಾಡುವ ಹಕ್ಕಿಲ್ಲ. ಹಾಗೇನಾದರೂ ಮಾಡಿದರೆ ಆತ ನರಕಕ್ಕೆ ಹೋಗುತ್ತಾನೆ. ಆದರೆ ಇಂದು ನಾವು ಯಾವುದೇ ಆಚರಣೆ ಮಾಡುವುದಿಲ್ಲವೆಂದರೆ ದಾಳಿ ಮಾಡುತ್ತಾರೆ. ನಮಗೆ ನಮ್ಮದೇ ಆದ ನಂಬಿಕೆಗಳಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಒಂದಿಷ್ಟ ಸ್ಪೇಸ್ ಸಿಕ್ಕಿದೆ. ಈ ಅವಕಾಶದಲ್ಲಿ ಶರಣ ಸಂಸ್ಕೃತಿಯ ಪ್ರತಿರೋಧದ ಜೊತೆಗೆ ಪರ್ಯಾಯವನ್ನು ಕಟ್ಟಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಭಾಗಿಯಾಗಿದ್ದವರ ಅಭಿಪ್ರಾಯಗಳು
ಉತ್ತರವನ್ನು ನಿರೀಕ್ಷಿಸುವುದು ಶರಣ ಚಳವಳಿಯಾಗಿತ್ತು. ಇಂದು ಪ್ರಶ್ನೆ ಕೇಳುವುದೇ ತಪ್ಪೆಂದಾಗಿದೆ. ಇಷ್ಟು ಅಸಹಿಷ್ಣುತೆಯನ್ನು ಭಾರತ ಎಂದಿಗೂ ಅನುಭವಿಸಿರಲಿಲ್ಲ.
-ಎಂ.ಎಸ್.ಆಶಾದೇವಿ, ವಿಮರ್ಶಕಿ
***
ಸಮಾನತೆಯೇ ವಚನ ಚಳವಳಿಯ ಉದ್ದೇಶವಾಗಿತ್ತು. ಸಾಣೇಹಳ್ಳಿ ಸ್ವಾಮೀಜಿಯವರು ಸತ್ಯವನ್ನು ಹೇಳಿದ್ದಾರೆ. ಆದರೆ ಅವರ ವಿರುದ್ಧ ದುರುದ್ದೇಶಪೂರಿತ ದಾಳಿ ನಡೆದಿದೆ. ಈ ಹಿಂದೆಯೂ ಹೀಗೆಯೇ ಎಂ.ಎಂ.ಕಲ್ಬುರ್ಗಿಯವರ ಮೇಲೆ, ಗೌರಿ ಲಂಕೇಶ್ ಅವರ ಮೇಲೆ ದಾಳಿ ಮಾಡಿ ಹತ್ಯೆಗೈಯಲಾಯಿತು. ಇಂತಹ ಬೆದರಿಕೆಗಳನ್ನು ವಿರೋಧಿಸಬೇಕಿದೆ. ಯಾವ ವ್ಯಕ್ತಿಯ ಬಗ್ಗೆಯೂ ಯಾವ ಅಸಹನೆಯೂ ನಮಗೆ ಇಲ್ಲ. ನಮ್ಮ ತತ್ವವನ್ನು ಪ್ರತಿಪಾದಿಸಿದ್ದೇವೆ. ಇದನ್ನು ಅನುಸರಿಸುವವರು ಅನುಸರಿಸುತ್ತಾರೆ.
– ಬಂಜಗೆರೆ ಜಯಪ್ರಕಾಶ್, ಚಿಂತಕರು
***
ದೊಡ್ಡ ವಿಚಾರಗಳು ಜಾತಿಯ ಕೂಪದಲ್ಲೋ, ಅವೈಚಾರಿಕರ ಕೂಪದಲ್ಲೋ ಬೀಳುವುದು ನಡೆಯುತ್ತಿದೆ. ಬುದ್ಧ, ಗಾಂಧಿ, ಬಸವ, ಅಂಬೇಡ್ಕರ್ ಅನುಯಾಯಿಗಳು ತತ್ವಗಳನ್ನು ಪಾಲಿಸುತ್ತಿಲ್ಲ. ಸಾಂಸ್ಕೃತಿಕ ತಳಹದಿಯನ್ನು ಕಟ್ಟಲು ಒಟ್ಟಾರೆ ಪ್ರಯತ್ನವನ್ನು ಮಾಡಲಾಗುತ್ತಿಲ್ಲ. ಯಾವುದೇ ವ್ಯಕ್ತಿ ಉದಾತ್ತ ವಿಚಾರವನ್ನು ಹೇಳಿದರೆ ಆ ವ್ಯಕ್ತಿಯ ಜಾತಿಯನ್ನು ನೋಡಿ ಸ್ವೀಕಾರ ಮಾಡುವುದು ನಡೆಯುತ್ತಿದೆ.
ಇಂದು ದಲಿತ ಚಳವಳಿಯೂ ತಪ್ಪು ಮಾಡಿದೆ. ಜಾತಿಗೆ ಸೀಮಿತಗೊಂಡಿದೆ. ಇದನ್ನು ಮೀರಿ ಹೋಗಬೇಕಿದೆ. ಜಾತ್ಯತೀತೆಯ ಬಗ್ಗೆ, ಧಾರ್ಮಿಕತೆಯ ಬಗ್ಗೆ ಬಹಳ ಉಡಾಫೆಯಿಂದ ಮಾತನಾಡುತ್ತಾರೆ. ನಾವು ಬಲವಾದ ಸಾಂಸ್ಕೃತಿಕ ತಳಹದಿಯನ್ನು ಕಟ್ಟಬೇಕಾಗಿದೆ.
-ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತರು, ಹೋರಾಟಗಾರರು
***
ರಾಜಕೀಯ ಸ್ವಾತಂತ್ರ್ಯ ಪಡೆದಿದ್ದೇವೆ. ಆದರೆ ಸಾಂಸ್ಕೃತಿಕವಾಗಿ ಗುಲಾಮರಾಗಿಯೇ ಇದ್ದೇವೆ. ಶರಣರು ಹೇಳಿದ ಪೂರಕವಾದ ಆಚರಣೆ ಇಲ್ಲ. ಸನಾತನವನ್ನು ಅನುಸರಿಸುತ್ತಿದ್ದೇವೆಯೇ ಹೊರತು ಸ್ವಂತದ್ದನ್ನಲ್ಲ. ವಚನಗಳು ಶರಣ ಧರ್ಮದ ಪಠ್ಯಗಳು. ವಚನಗಳಲ್ಲಿ ವೇದ ವಿರೋಧವಿಲ್ಲ ಎನ್ನುವ ಮಹಾಜ್ಞಾನಿಗಳು 336 ವಚನಗಳು ವೇದಗಳನ್ನು ವಿರೋಧಿಸಿವೆ ಎಂಬುದನ್ನು ನೋಡಬೇಕು. ವೇದ, ಶಾಸ್ತ್ರ, ಪುರಾಣ, ಆಗಮಗಳನ್ನು ವಚನ ಸಾಹಿತ್ಯ ವಿರೋಧಿಸಿದೆಯೇ ಹೊರತು ಉಪನಿಷತ್ತನಲ್ಲ. ಇದು ಶರಣಗಿರಿಗಿದ್ದ ವಿವೇಕ.
– ಎಸ್.ಜಿ.ಸಿದ್ದರಾಮಯ್ಯ, ಸಾಹಿತಿ
***
ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಮೊಟ್ಟೆ ಕೊಡಬೇಕು ಎಂದಾಗ ಮಠಾಧೀಶರುಗಳು ವಿರೋಧಿಸಿದ್ದನ್ನು ನೋಡಿದ್ದೇವೆ. ಬೆಂಬಲಕ್ಕೆ ಯಾವ ಸ್ವಾಮೀಜಿಯೂ ಬರಲಿಲ್ಲ. ಮಾಂಸಾಹಾರವನ್ನು ವಚನಕಾರರು ಎಲ್ಲಿ ವಿರೋಧಿಸಿದ್ದಾರೆ? ಶಾಲೆಗಳಲ್ಲಿ ಗಣಪತಿ, ಸರಸ್ಪತಿ ಪೂಜೆ ಮಾಡುತ್ತಾರೆ. ಇದರ ಬದಲಾಗಿ ವಚನಾದಿ ಶರಣರ ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಡುವ ವ್ಯವಸ್ಥೆ ಆಗಬೇಕಿದೆ. ಬಸವಣ್ಣನವರು ಮಕ್ಕಳ ಮನಸ್ಸಿನಲ್ಲಿ ಹೋಗಬೇಕು.
-ಮಾವಳ್ಳಿ ಶಂಕರ್, ದಲಿತ ಹೋರಾಟಗಾರರು
****
ಜೈನ, ಬೌದ್ಧ, ಬಸವ ಧರ್ಮಗಳು ಶಾಂತಿ, ಸಮಾನತೆಯನ್ನು ಪ್ರತಿಪಾದಿಸಿದವು. ಇವುಗಳ ಪ್ರತಿಪಾದಕರಾಗಿದ್ದ ಗೌರಿ ಲಂಕೇಶ್ ಮತ್ತು ಎಂ.ಎಂ.ಕಲ್ಬುರ್ಗಿಯವರ ಹತ್ಯೆಯಾಯಿತು. ಈಗ ಅರವತ್ತು ಜನರು ಹಿಟ್ ಲಿಸ್ಟ್‌ನಲ್ಲಿದ್ದಾರೆ. ಈಗ ಸಾಣೇಹಳ್ಳಿ ಸ್ವಾಮೀಜಿಯವರನ್ನು ಸೇರಿಸಿಕೊಂಡಿದ್ದಾರೆ.
– ಸಿ.ಬಸವಲಿಂಗಯ್ಯ, ರಂಗಕರ್ಮಿ
***
ನಾವೀಗ ಕ್ರಿಯಾರಂಗಕ್ಕೆ ಇಳಿಯಬೇಕಾಗಿದೆ. ತರುಣ ಜನಾಂಗವನ್ನು ತಲುಪಲು ದಾರಿ ಹುಡುಕಬೇಕಿದೆ. ಶೂದ್ರ ಮಠಗಳು ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರಧಾರೆಗಳನ್ನು ಪ್ರಚಾರ ಮಾಡಬೇಕು. ನಿಧಾನಕ್ಕಾದರೂ ಈ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಬಸವಾದಿ ಶರಣರ ಹತ್ಯೆಯಾಗಿ ಎಂಟುನೂರು ವರ್ಷಗಳಾದವು. ಈವರೆಗೆ ಒಂದೇ ಒಂದು ಪ್ರತಿಭಟನೆ ಈ ಕುರಿತು ಆಗಿಲ್ಲ. ಈಗಲಾದರೂ ಪ್ರತಿಭಟನೆ ನಡೆಸಬೇಕು. ಕಲ್ಬುರ್ಗಿ, ಗೌರಿಯವರನ್ನು ಏಕೆ ಕೊಂದರೆಂದು ಜನರು ಅರ್ಥಮಾಡಿಕೊಳ್ಳಬೇಕು.
ಪಿತೃ ಹತ್ಯೆ, ಮಾತೃ ಹತ್ಯೆಯನ್ನು ಸನಾತನ ಧರ್ಮ ಹೇಳುತ್ತದೆ. ಪರಶುರಾಮ ಥೀಮ್ ಪಾರ್ಕ್ ಮಾಡುತ್ತಾರೆ, ಆದರೆ ನಾವ್ಯಾರು ವಿರೋಧಿಸಲಿಲ್ಲ. ಪರುಶುರಾಮ ಮಾಡಿದ್ದೇನು? ತಾಯಿಯನ್ನು ಕೊಂದನು. ಶೂದ್ರರಿಗೆ ವಿದ್ಯೆಯ ನಿರಾಕರಣೆ, ಮಹಿಳೆಯ ಸಮಾನತೆ ನಿರಾಕರಣೆಯ ಸಂಕೇತ ಪರಶುರಾಮ. ಆರ್‌ಎಸ್‌ಎಸ್ ಮೊದಲೆಲ್ಲ ರಾಮನ ಬದಲು ಪರಶುರಾಮನ ಚಿತ್ರಗಳನ್ನು ಶಾಖೆಯಲ್ಲಿ ಹಾಕಿಕೊಳ್ಳುತ್ತಿತ್ತು.
– ಎಲ್.ಎನ್.ಮುಕುಂದರಾಜ್, ಚಿಂತಕರು
***
ಎಲ್ಲ ಹೋರಾಟಗಳು ತಮ್ಮದೇ ಮಿತಿಗಳಲ್ಲಿ ಇವೆ. ಅವುಗಳನ್ನು ಒಡೆದು ಹಿರಿಯರು ಹೊರಬಾರದಿದ್ದರೆ ಕಿರಿಯರಿಗೆ ಮಾದರಿಯಾಗುವುದಿಲ್ಲ. ಸಾಣೇಹಳ್ಳಿ ಶ್ರೀಗಳ ವಿರುದ್ಧ ಮಾತನಾಡಿದ್ದಾರೆ. ಒಂದು ಸಣ್ಣಕಲ್ಲುನ್ನು ಹಾಕಿ ಎಂತಹ ತರಂಗ ಬರುತ್ತದೆ ಎಂದು ಪರಿಶೀಲಿಸಿದ್ದಾರೆ.
– ಎಚ್.ಎಲ್.ಪುಷ್ಪಾ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ
***
ಸಂಶೋಧಕರಾದ ಎಂ.ಎಂ.ಕಲ್ಬುರ್ಗಿಯವರ ಹತ್ಯೆಯ ಚಾರ್ಜ್‌ಶೀಟ್‌ನಲ್ಲಿ ಕನ್ನಡದ ಟಿವಿ ಚಾನೆಲ್‌ಗಳನ್ನು ಹೆಸರಿಸಲಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಚಾರ್ಜ್‌ಶೀಟ್‌ನ ಪ್ರಕಾರ, ಒಬ್ಬ ಆರೋಪಿಯನ್ನು ಮಠದಲ್ಲಿ ಸಭೆ ನಡೆಸುತ್ತಿದ್ದಾಗ ಹೊರಗೆ ಕರೆತಂದು ಅರೆಸ್ಟ್ ಮಾಡಲಾಯಿತು. ಗೌರಿ ಹತ್ಯೆಯಲ್ಲಿ ಭಾಗಿಯಾಗಿರುವ ಹಿಂದೂ ಜಾಗರಣ ವೇದಿಕೆ ಸಭೆಗಳಿಗೆ ಕರ್ನಾಟಕ ಪ್ರಭಾವಿ ಮಠವೊಂದರಲ್ಲಿ ಅವಕಾಶ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಿದೆ.
– ಡಾ.ಎಚ್.ವಿ.ವಾಸು, ಸಾಮಾಜಿಕ ಹೋರಾಟಗಾರರು
***
ಬಸವತತ್ವದ ಮೇಲಿನ ದಾಳಿ ಎಂದರೆ ಸಂವಿಧಾನದ ಮೇಲಿನ ದಾಳಿಯೇ ಆಗಿದೆ. ಬಸವ ತತ್ವ ಬೇರೆಯಲ್ಲ, ಸಂವಿಧಾನ ಬೇರೆಯಲ್ಲ.
– ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞರು
***
ಬಸವ ತತ್ವದ ಮೇಲೆ ದಾಳಿ ಮಾಡಬೇಕು, ಅದನ್ನು ಬಳಸಿಕೊಂಡು 2024ರ ಚುನಾವಣೆಯನ್ನು ಗೆಲ್ಲಬೇಕು ಎಂಬುದು ಅವರ ಗುರಿ. ಅವರು ಮೂರನೇ ಸಲ ಗೆದ್ದರೆ ಏನಾಗಬಹುದು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬಸವತತ್ವದ ಮೂಲವಿಚಾರಗಳು ಮತ್ತು ಅದರ ಮೇಲಿನ ದಾಳಿಯ ಸಂಗತಿಗಳನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಪ್ರತಿ ಮನೆಗೂ ತಲುಪಿಸಬೇಕು.
-ಜಿ.ಎನ್.ನಾಗರಾಜ್, ಚಿಂತಕರು
***
ಕೋಮುವಾದಿ ಪಕ್ಷ ಎಂಬ ಕಾರಣಕ್ಕೆ ಬಿಜೆಪಿಯನ್ನು ನಾವೆಲ್ಲರೂ ವಿರೋಧಿಸಿದ್ದೇವೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಪರ್ಯಾಯವೆಂದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಬಹಳಷ್ಟು ಮಂದಿ ಇಲ್ಲಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಕೂಡ ಪರಿಪೂರ್ಣವಾದ ಸೈದ್ಧಾಂತಿಕ ಪಕ್ಷವಲ್ಲ ಎಂಬ ಎಚ್ಚರ ನಮಗಿರಬೇಕು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧಾಂತಕ್ಕೆ ಬದ್ಧರಾಗಿರುವ ಕೆಲವು ನಾಯಕರಿದ್ದಾರೆ ಎಂಬುದನ್ನೂ ಗಮನಿಸಬೇಕು. ಜನಜಾಗೃತಿಯ ಯಶಸ್ಸಿಗೆ ಕುಲಮೆಯಲ್ಲಿನ ಬೆಂಕಿ ಆರಲು ಬಿಡಬಾರದು. ಆಗ ಮಾತ್ರ ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ.
– ದಿನೇಶ್ ಅಮೀನ್‌ಮಟ್ಟು, ಹಿರಿಯ ಪತ್ರಕರ್ತರು
***
ಬಸವತತ್ವವನ್ನು ಮಠಗಳಿಗೆ ಬರುವ ಜನರಿಗೆ ಹೇಳಿಕೊಡಬೇಕು. ಹಳ್ಳಿಗಾಡಿನ ಜನರ ಮೇಲೆ ನನಗೆ ನಂಬಿಕೆ ಇದೆ. ಈ ವಿದ್ಯಾವಂತರ ಮೇಲೆ ಖಂಡಿತ ಇಲ್ಲ.
– ಬಿ.ಟಿ.ಲಲಿತಾ ನಾಯ್ಕ್, ಹೋರಾಟಗಾರ್ತಿ
***
ಇಂದು ಇದ್ದಿದ್ದರೆ ಬಸವಣ್ಣನವರು ಅಂತರಜಾತಿ ವಿವಾಹಗಳನ್ನು ಮಾಡಿಸುತ್ತಿದ್ದರು. ಆದರೆ ವಿಜಾತಿ ವಿವಾಹಗಳಾದರೆ ತಂದೆ ತಾಯಿಗಳೇ ಮಕ್ಕಳನ್ನು ಹತ್ಯೆ ಮಾಡುತ್ತಿದ್ದಾರೆ. ಮರ್ಯಾದೆಗೇಡು ಹತ್ಯೆಗಳ ವಿರುದ್ಧವಾಗಿ ಹಳ್ಳಿಹಳ್ಳಿಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು. ಹೀಗಾದಾಗ ಮಾತ್ರ ಅರ್ಧಕ್ಕೆ ನಿಂತ ಕಲ್ಯಾಣ ಕ್ರಾಂತಿ ಮುಂದುವರಿದಂತೆ ಆಗುತ್ತದೆ.
– ಬಿ.ಶ್ರೀಪಾದ ಭಟ್, ಶಿಕ್ಷಣ ತಜ್ಞರು
****
ಸಾರಕ್ಕೆ ಬೆಂಕಿ ಇಟ್ಟು ರೂಪವನ್ನು ಆರಾಧಿಸುವ ಷಡ್ಯಂತ್ರ ನಡೆಯುತ್ತಿದೆ. ಅಂಬೇಡ್ಕರ್, ಬಸವಣ್ಣನವರ ತತ್ವಗಳಿಗೆ ಬೆಂಕಿ ಇಟ್ಟು ಪ್ರತಿಮೆ, ಭವನ ಗಳನ್ನು ನಿರ್ಮಿಸುತ್ತಿದ್ದಾರೆ. ಬಸವ ತತ್ವ ವಿಸ್ತರಣೆಯಾಗಿದ್ದು ದಲಿತರ ನಡುವೆ ಹೋಗಿದ್ದರಿಂದ. ಈಗಲೂ ಕೂಡ ಅವರ ಜೊತೆ ಹೋಗಬೇಕಾಗಿದೆ.
– ಡಿ.ಉಮಾಪತಿ, ಹಿರಿಯ ಪತ್ರಕರ್ತರು
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು
ಬೆಳಗಾವಿಯ ಬಸವ ಪ್ರಕಾಶ ಸ್ವಾಮೀಜಿ, ಬೆಂಗಳೂರಿನ ಬಸವ ಯೋಗಿ ಸ್ವಾಮೀಜಿ, ಹೋರಾಟಗಾರರಾದ ಸಿದ್ದಪ್ಪ ಮೂಲಗೆ, ಲೀಲಾ ಸಂಪಿಗೆ, ವಡ್ಡಗೆರೆ ನಾಗರಾಜಯ್ಯ, ಪ್ರೊ.ಟಿ.ಆರ್.ಚಂದ್ರಶೇಖರ್, ಗೊ.ರು.ಚನ್ನಬಸಪ್ಪ, ಆರ್.ಜಿ.ಹಳ್ಳಿ ನಾಗರಾಜ್, ಮಾತೆ ಅಕ್ಕನಾಗಲಾಂಬಿಕೆ, ಕುಂ.ವೀರಭದ್ರಪ್ಪ, ಡಾ.ಬಸವರಾಜ ಸಬರದ, ಕೆ.ಷರೀಫಾ, ಹನುಮೇಶ್ ಗುಂಡೂರು, ಅಭಿಗೌಡ ಹನಕೆರೆ, ವಿನಯ್ ಕಸ್ವೆ, ಡಿ.ಎನ್.ಗುರುಪ್ರಸಾದ್, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಹ.ರಾ.ಮಹೇಶ್, ಡಾ.ಅರವಿಂದ ಜತ್ತಿ, ಬಿ.ಸಿ.ಬಸವರಾಜು ಸೇರಿದಂತೆ ಹಲವು ಜನರು ಭಾಗಿಯಾಗಿದ್ದರು.