ಮತ್ತೆ ಕಲ್ಯಾಣ ಮಾಡಿದಾಗಲೂ ದಾಳಿ ನಡೆದಿತ್ತು: ಅನುಭವ ಮಂಟಪದಲ್ಲಿ ಸಾಣೇಹಳ್ಳಿ ಶ್ರೀಗಳು ಹೇಳಿದ್ದೇನು?

Date:

Advertisements

“ಮೂವತ್ತು ಜಿಲ್ಲೆಗಳಲ್ಲಿ ಮತ್ತೆ ಕಲ್ಯಾಣ ಮಾಡಿದಾಗ ಅಲ್ಲಿ ಬರೀ ಲಿಂಗಾಯತರು ಇರಲಿಲ್ಲ…”

“ಮತ್ತೆ ಕಲ್ಯಾಣ ಕಾರ್ಯಕ್ರಮ ಮಾಡಿದಾಗಲೂ ದಾಳಿ ನಡೆದಿತ್ತು. ಇಂದು ಅದಕ್ಕಿಂತ ದೊಡ್ಡದಾಗಿ ದಾಳಿಯಾಗುತ್ತಿದೆ” ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಸವಾದಿ ಶರಣರ ತತ್ವಗಳ ಮೇಲೆ ಮುಂದುವರಿದ ದಾಳಿಯನ್ನು ವಿರೋಧಿಸಿ ’ಕರ್ನಾಟಕ ಪ್ರಜ್ಞಾವಂತರ ಅನುಭವ ಮಂಟಪ’ ವೇದಿಕೆಯು ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

Advertisements

ಮೂವತ್ತು ಜಿಲ್ಲೆಗಳಲ್ಲಿ ಮತ್ತೆ ಕಲ್ಯಾಣ ಮಾಡಿದಾಗ ಅಲ್ಲಿ ಬರೀ ಲಿಂಗಾಯತರು ಇರಲಿಲ್ಲ. ಬರೀ ಬಸವ ಭಕ್ತರು ಇರಲಿಲ್ಲ. ದಲಿತಪ್ರಜ್ಞೆ ಇರುವ ಜನರೇ ಆ ಮತ್ತೆಕಲ್ಯಾಣವನ್ನು ಯಶಸ್ವಿ ಮಾಡಿದರು. ಅಂದು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ಸ್ಮರಿಸಿದರು.

ಸಾಣೇಹಳ್ಳಿ ಸ್ವಾಮೀಜಿಯವರ ಭಾಷಣದ ಪೂರ್ಣ ಪಠ್ಯ

ಕರ್ನಾಟಕದಲ್ಲಿ ಹನ್ನೆರಡನೇ ಶತಮಾನದಿಂದ ಇಂದಿನವರೆಗೂ ಪ್ರಗತಿಯ ವಿರೋಧಿಗಳು ತುಂಬಾ ಜನ ಇದ್ದಾರೆ. ಎಡ ಮತ್ತು ಬಲ ಪಂಥದಲ್ಲೂ ಅವರನ್ನು ಕಾಣಬಹುದು. ನಮಗೆ ಒಂದು ಬದ್ಧತೆ ಇದ್ದರೆ ಮಾತ್ರ ಅವೆಲ್ಲವನ್ನೂ ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ.  ಹೊತ್ತು ಬಂದ ಹಾಗೆ ಕೊಡೆ ಹಿಡಿಯುವ ಪ್ರವೃತ್ತಿ ಬಂತೆಂದರೆ ಎಲ್ಲ ಸಭೆಗಳು ಕೂಡ ತಾತ್ಕಾಲಿಕ ಆಗಿಬಿಡುತ್ತವೆ. ಹನ್ನೆರಡನೇ ಶತಮಾನದಲ್ಲಿ ಅಷ್ಟೊಂದು ಬದಲಾವಣೆಯನ್ನು ತರಲಿಕ್ಕೆ ಅವರೆಲ್ಲರ ಬದ್ಧತೆಯೇ ಕಾರಣ. ಅವರಿಗೆ ಕಾಯಕ ಶ್ರದ್ಧೆ ಇತ್ತು. ದಾಸೋಹ ಪ್ರಜ್ಞೆ ಇತ್ತು. ಸಮಸಮಾಜವನ್ನು ಕಟ್ಟುವ ಕನಸಿತ್ತು. ಅವುಗಳ ಕಾರಣದಿಂದಾಗಿ ಯಶಸ್ಸನ್ನು ಸಾಧಿಸಿದರು. ಆದರೆ ಇಂದು ಯಾವುದ್ಯಾವುದೋ ಲಾಭಕ್ಕಾಗಿ ನಾವು ಏನೇನೋ ಮಾಡುತ್ತಿದ್ದೇವೆ. ಯಾರನ್ನು ಹೊಗಳಿದರೆ ಏನು ದಕ್ಕಬಹುದು, ತೆಗಳಿದರೆ ಏನು ತೊಂದರೆಯಾಗಬಹುದು ಎಂದು ನೋಡುತ್ತಾರೆ. ವ್ಯವಸ್ಥಿತವಾಗಿ ಸಂಚು ನಡೆಯುತ್ತಿದೆ ಎಂದರೆ ಬದ್ಧತೆ ಇಲ್ಲ ಅಂತ ಅರ್ಥ.

ಇಂದು ಅನುಭವ ಮಂಟಪದ ಹೆಸರಲ್ಲಿ ನಡೆದ ಸಂವಾದ ನನಗೆ ಖುಷಿ ಕೊಟ್ಟಿದೆ. ಮಹಾತ್ಮ ಗಾಂಧಿಯವರ ಹೆಸರಿರುವ ಸ್ಥಳದಲ್ಲಿ ಕಾರ್ಯಕ್ರಮ ನಡೆದಿದೆ. ಇದು ನಮ್ಮ ಮೊದಲನೇ ಯಶಸ್ಸು ಎಂದು ಭಾವಿಸುತ್ತೇನೆ.

ಮತ್ತೆ ಕಲ್ಯಾಣ ಕಾರ್ಯಕ್ರಮದ ಪ್ರಸ್ತಾಪವಾಯಿತು. 2019ರಲ್ಲಿ ಮತ್ತೆ ಕಲ್ಯಾಣ ಮಾಡುವಾಗ ಇಂತಹದ್ದೇ ವೇದಿಕೆಯನ್ನು ಬಸವ ಮಂಟಪದಲ್ಲಿ ಮಾಡಿದ್ದೆವು. ಪ್ರಗತಿಪರರು ಸೇರಿದ್ದರು. ತುಂಬಾ ಚಿಂತನೆ ನಡೆಯಿತು. ಆ ಚಿಂತನೆಯ ಫಲವಾಗಿಯೇ ಮೂವತ್ತು ಜಿಲ್ಲೆಗಳಲ್ಲೂ ಕಾರ್ಯಕ್ರಮ ಯಶಸ್ವಿಯಾಯಿತು.

ಅಂದು ಕೂಡ ನಮ್ಮ ಮೇಲೆ ದಾಳಿ ಮಾಡಿದವರು ಇದ್ದರು. ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದರು. ’ಬೈದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ’- ಬಸವಣ್ಣವರೇ ಈ ತತ್ವಗಳನ್ನು ಕಲಿಸಿಕೊಟ್ಟಿದ್ದಾರೆ, ಯಾರಾದರೂ ನಮ್ಮ ಮೇಲೆ ದಾಳಿ ಮಾಡಬಹುದು ಎಂದಿದ್ದೆ.

ಆದರೆ ಈ ದಾಳಿ ಈ ಪ್ರಮಾಣದಲ್ಲಿ ಜನರು ಸೇರಲು ಕಾರಣವಾಗುತ್ತದೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ಇದೊಂದು ಎಚ್ಚರಿಕೆಯ ಘಂಟೆಯಾಗಿದೆ. ಈಗ ನಾವು ಏನು ಮಾಡಬೇಕೆಂದರೆ- ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ- ಈ ನಾಲ್ಕು ಜನರು ಕೂಡ ನಮ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸಬೇಕು. ಇನ್ನೂ ಅನೇಕ ಮಹನೀಯರಿದ್ದಾರೆ. ಈ ನಾಲ್ಕು ಜನರನ್ನು ಸಾಂಕೇತಿಕವಾಗಿ ಹೇಳಿದೆನಷ್ಟೇ.

ಚಿಕ್ಕಚಿಕ್ಕ ಪುಸ್ತಕಗಳ ರೂಪದಲ್ಲಿ ವಿಚಾರಗಳನ್ನು ವಿಸ್ತರಿಸಬೇಕಿದೆ. ಶರಣರ ಆಲೋಚನೆಗಳ ಕುರಿತಂತೆ ಹತ್ತು ಪುಸ್ತಕಗಳನ್ನು ಇನ್ನೊಂದು ತಿಂಗಳಲ್ಲಿ ತರಬೇಕೆಂಬ ಚಿಂತನೆಗಳನ್ನು ಮಾಡಿದ್ದೇವೆ. ಅನೇಕ ಜನ ಸಾಹಿತಿಗಳಿದ್ದೀರಿ. ವೈಚಾರಿಕ ಪ್ರಜ್ಞೆಯ ಹಿನ್ನೆಲೆಯಲ್ಲಿ ನಿಮ್ಮ ಆಲೋಚನೆಗಳನ್ನು ನಲವತ್ತು ಪುಟಗಳ ಮಿತಿಯಲ್ಲಿ ಪ್ರಸಾರಾಂಗಕ್ಕೆ ತಂದುಕೊಟ್ಟರೆ ಅವುಗಳನ್ನು ಪ್ರಕಟಿಸಿ, ಪ್ರಸಾರ ಮಾಡುವ ಕೆಲಸವನ್ನು ಮಾಡುತ್ತೇವೆ.

ಇದರ ಜೊತೆಯಲ್ಲಿಯೇ ಮತ್ತೆ ಕಲ್ಯಾಣ ನಡೆಯಬೇಕೆಂದು ಎಲ್ಲರೂ ಹೇಳಿದ್ದೀರಿ. ಇದು ನಡೆಯಬೇಕೆಂದರೆ ಒಂದು ಸಮಿತಿಯನ್ನು ನೀವು ಮಾಡಬೇಕು. ಆ ಸಮಿತಿಯಲ್ಲಿ ಎಲ್ಲಾ ವರ್ಗದ ಜನರು ಇರಬೇಕು. ಅವರೆಲ್ಲರೂ ಇದ್ದು ಹೇಗೆ ಮಾಡಬೇಕೆಂದು ಚಿಂತನೆ ಮಾಡಬೇಕು.

ಖಂಡಿತ ಈ ಕಾರ್ಯಕ್ರಮ ಮಾಡಲು ಜನರು ಸಿದ್ಧವಿದ್ದಾರೆ. ಮೂವತ್ತು ಜಿಲ್ಲೆಗಳಲ್ಲಿ ಮತ್ತೆ ಕಲ್ಯಾಣ ಮಾಡಿದಾಗ ಅಲ್ಲಿ ಬರೀ ಲಿಂಗಾಯತರು ಇರಲಿಲ್ಲ. ಬರೀ ಬಸವ ಭಕ್ತರು ಇರಲಿಲ್ಲ. ದಲಿತಪ್ರಜ್ಞೆ ಇರುವ ಜನರೇ ಆ ಮತ್ತೆ ಕಲ್ಯಾಣವನ್ನು ಯಶಸ್ವಿ ಮಾಡಿದ್ದು. ಮುಸ್ಲಿಮರು ಅದರಲ್ಲಿ ಹೆಚ್ಚಿನದಾಗಿ ಭಾಗವಹಿಸಿದ್ದರು. ಬಳ್ಳಾರಿಯಲ್ಲಿ ಬರೀ ಮುಸ್ಲಿಮರೇ ಆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಊಟಕ್ಕೆ ಇಟ್ಟವರು ಅವರೇ, ಕಾರ್ಯಕ್ರಮ ನಡೆಸಿದವರು ಅವರೇ. ಮಂಗಳೂರಿನಲ್ಲಿ ಮತ್ತೆ ಕಲ್ಯಾಣಕ್ಕೆ ಸ್ವಾಗತ ಮಾಡಿದ್ದು ಮುಸ್ಲಿಂ ಹೆಣ್ಣುಮಕ್ಕಳು. ಅವರೆಲ್ಲರೂ ಮುಂದೆ ಬಂದು ಆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಹಾಗಾಗಿ ಜನರಲ್ಲಿ ಜಾಗೃತಿಯಾಗುವ ಮನಸ್ಥಿತಿಯಲ್ಲಿದೆ. ನಾವು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗಬೇಕಿದೆ.

ನಮ್ಮನ್ನೂ ಮೂಲಭೂತವಾದಿಗಳು ಎಂದು ಕರೆಯುತ್ತಲೇ ಇದ್ದಾರೆ. ನಾವು ಸಂತೋಷವನ್ನೇ ಪಡುತ್ತೇವೆ.  ಆ ಭಾವ ಇದ್ದರೆ ಬದಲಾವಣೆ ಆಗಲಿಕ್ಕಾದರೂ ಸಾಧ್ಯವಾಗುತ್ತದೆ. ಬಹಳ ಹಿಂದೆ ಸಿಜಿಕೆಯವರು ಇದ್ದಾಗಲೇ ಒಂದು ಪತ್ರಿಕೆ, “ಸಾಣೇಹಳ್ಳಿ ನಕ್ಸಲೈಟ್ಸ್ ಕೇಂದ್ರವಾಗುತ್ತಿದೆ” ಎಂದು ಬರೆಯಿತು. ಸಿಜಿಕೆಯವರು ತುಂಬಾ ಗಾಬರಿಯಾದರು. ಸ್ವಾಮೀಜಿ, ನಾಳೆ ನಿಮ್ಮನ್ನು ಅರೆಸ್ಟ್ ಮಾಡಿಬಿಡುತ್ತಾರೆ ಎಂದರು. ತಕ್ಷಣ ನಾವು ಒಂದು ಪ್ರತಿಕ್ರಿಯೆ ಕೊಟ್ಟೆವು. “ಸಾಣೇಹಳ್ಳಿ ನಕ್ಸಲೈಟ್ಸ್‌ ಕೇಂದ್ರವಾಗುವುದಾದರೆ ನಾವು ತುಂಬಾ ಸಂತೋಷಪಡುತ್ತೇವೆ. ಎಲ್ಲರನ್ನೂ ಬದಲಿಸುವ ಮನಸ್ಸನ್ನು ದೇವರು ನಮಗೆ ಕರುಣಿಸಿದ್ದಾನೆ. ಖಂಡಿತ ಬದಲಾವಣೆ ಮಾಡುತ್ತೇವೆ” ಎಂದೆವು. ಈಗಲೂ ಏನೇನೋ ಬರುತ್ತಿವೆ.  ಅವೆಲ್ಲವೂ ನಮ್ಮನ್ನು ಗಟ್ಟಿಗೊಳಿಸಲಿಕ್ಕೆ ಮತ್ತು ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗಲಿಕ್ಕೆ ಆಗಿವೆ ಎಂದು ನಾವು ಭಾವಿಸಿದ್ದೇವೆ.

– ಸಾಣೇಹಳ್ಳಿ ಸ್ವಾಮೀಜಿ
(ಅನುಭವ ಮಂಟಪದಲ್ಲಿ ಮಾಡಿದ ಭಾಷಣದ ಅಕ್ಷರ ರೂಪ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X