“ಇಂದು ಪಂಡಿತಾರಾಧ್ಯ ಸ್ವಾಮೀಜಿಯವರ ಮೇಲೆ ನಡೆದ ದಾಳಿಯಲ್ಲೂ ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಅವರ ಮೇಲಾದ ದಾಳಿಯ ಛಾಯೆ ಇದೆ…”
“ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಮತ್ತು ಎಲ್ಲಾ ಶಾಲೆಗಳಲ್ಲಿ ವಚನಗಳ ಓದನ್ನು ಒಂದು ಶೈಕ್ಷಣಿಕ ಅಭಿಯಾನದ ಭಾಗವಾಗಿಸಬೇಕು” ಎಂದು ಅನುಭವ ಮಂಟಪ ವೇದಿಕೆ ಆಗ್ರಹಿಸಿದೆ.
ಬಸವಾದಿ ಶರಣರ ತತ್ವಗಳ ಮೇಲೆ ಮುಂದುವರಿದ ದಾಳಿಯನ್ನು ವಿರೋಧಿಸಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವೇದಿಕೆಯು ಹಮ್ಮಿಕೊಂಡಿದ್ದ ಸಭೆಯು ನಾಲ್ಕು ನಿರ್ಣಯಗಳನ್ನು ಅಂಗೀಕರಿಸಿ ಆ ಒತ್ತಾಯವನ್ನು ಮಾಡಿದೆ.
ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಂಘಟಕರು ನಾಲ್ಕು ನಿರ್ಣಯಗಳನ್ನು ತಿಳಿಸಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ 129 ಮಂದಿ ಸಹಿ ಮಾಡಿದ್ದಾರೆ.
ಹೋರಾಟಗಾರರಾದ ಸಿದ್ಧನಗೌಡ ಪಾಟೀಲ, ಮಾವಳ್ಳಿ ಶಂಕರ್, ಬಂಜಗೆರೆ ಜಯಪ್ರಕಾಶ್, ಎಸ್.ಜಿ.ಸಿದ್ದರಾಮಯ್ಯ, ಲೀಲಾ ಸಂಪಿಗೆ ಮತ್ತು ಸಿದ್ದಪ್ಪ ಮೂಲಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಅನುಭವ ಮಂಟಪದ ನಾಲ್ಕು ನಿರ್ಣಯಗಳು
1. ಸಾಣೇಹಳ್ಳಿ ಪಂಡಿತಾರಾಧ್ಯರಾದಿಯಾಗಿ ರಾಜ್ಯದ ಧಾರ್ಮಿಕ ಗುರುಗಳು, ಚಿಂತಕರು, ಸಾಹಿತಿಗಳು ಮತ್ತು ಹೋರಾಟಗಾರರ ಮೇಲೆ ನಡೆಯುತ್ತಿರುವ ವರ್ಣವ್ಯವಸ್ಥೆಯ ಪ್ರತಿಪಾದಕರ ದಾಳಿಯು ಕರ್ನಾಟಕದ ಹೆಮ್ಮೆಯ ಬಸವ ತತ್ವದ ಮೇಲಾದ ದಾಳಿಯ ಮುಂದುವರಿಕೆ ಎಂದು ಈ ಸಭೆಯು ಭಾವಿಸುತ್ತದೆ ಮತ್ತು ಅದನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತದೆ.
ಕರ್ನಾಟಕದ ಪರಂಪರೆ, ಘನತೆ ಹಾಗೂ ಅಸ್ಮಿತೆಯನ್ನು ನಾಶಪಡಿಸುವ ಹಾಗೆ ಇಲ್ಲಿ ಇಬ್ಬರು ಧೀಮಂತ ವ್ಯಕ್ತಿಗಳನ್ನು (ಡಾ.ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್) ಹತ್ಯೆ ಗೈಯ್ಯಲಾಯಿತು. ಆ ರೀತಿ ಮಾಡುವ ಮುನ್ನ ಮತ್ತು ನಂತರ ಅಂತಹ ಹತ್ಯೆಗಳನ್ನು ಸಮರ್ಥಿಸುವ ರೀತಿಯ ಬರಹ, ಮಾತುಗಳು ಮಾಧ್ಯಮಗಳಲ್ಲಿ ಪ್ರಸಾರವಾದವು. ಇದು ಅಕ್ಷರವನ್ನು ಜೀವ ತೆಗೆಯಲು ಬಳಸುವ ಅಪಾಯಕಾರಿ ನಡೆಯೆಂದು ನಾವು ಭಾವಿಸುತ್ತೇವೆ.
ಇಂದು ಪಂಡಿತಾರಾಧ್ಯರ ಮೇಲೆ ನಡೆದ ದಾಳಿಯಲ್ಲೂ ಇಂತಹ ಛಾಯೆಯಿದೆ. ಮೇಲೆ ಹೇಳಲಾದ ಹತ್ಯೆಗಳ ವಿಚಾರದಲ್ಲಿ ಆರೋಪಿ ಸ್ಥಾನದಲ್ಲಿರುವವರಿಗೂ, ಆ ನಂತರವೂ ಕರ್ನಾಟಕದ ವಿದ್ವಾಂಸರು, ವೈಚಾರಿಕರಿಗೆ ಕೊಲೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪದಲ್ಲಿ ಇತ್ತೀಚೆಗೆ ಬಂಧಿತನಾದ ವ್ಯಕ್ತಿಗೂ ಸಂಬಂಧವಿರುವ ಕುರಿತಂತೆ ಪೊಲೀಸರು ಮಾಹಿತಿಯನ್ನು ಹೊರಗೆಡಹಿದ್ದಾರೆ. ಇದು ಈ ನಾಡಿಗೆ ಕಳಂಕವನ್ನು ತರುವ ಕೆಲಸವಾಗಿದೆ. ಇದರ ವಿರುದ್ಧ ಕನ್ನಡ ಸಮಾಜ ಎಚ್ಚರ ವಹಿಸುವುದರ ಭಾಗವೇ ಈ ಸಭೆ. ಈ ಎಚ್ಚರವನ್ನು ವಿಸ್ತರಿಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತೇವೆ. ಇಂತಹ ಶಕ್ತಿಗಳನ್ನು ನಿಗ್ರಹಿಸುವ ಕೆಲಸ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ.
2. ಕರ್ನಾಟಕದ ಇತಿಹಾಸದ ಅತ್ಯಂತ ಹೆಮ್ಮೆಯ ವಿದ್ಯಮಾನಗಳಲ್ಲಿ 12ನೇ ಶತಮಾನದ ವಚನ ಚಳವಳಿಯೂ ಒಂದು. ಅದರ ಮಹತ್ವದ ವಚನಕಾರ ಹಾಗೂ ನಾಯಕನಾದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಬೇಕೆಂದು ಈ ಸಭೆಯು ಆಗ್ರಹಿಸುತ್ತದೆ.
3. ಕರ್ನಾಟಕವೆಂಬ ಹೆಸರನ್ನು ಅಧಿಕೃತವಾಗಿ ಈ ನಾಡಿಗೆ ಇಟ್ಟು 50 ವರ್ಷಗಳಾಗುತ್ತಿರುವ ಹೊತ್ತಿನಲ್ಲಿ, ಎಲ್ಲಾ ಶಾಲೆಗಳಲ್ಲಿ ವಚನಗಳ ಓದನ್ನು ಒಂದು ಶೈಕ್ಷಣಿಕ ಅಭಿಯಾನದ ಭಾಗವಾಗಿಸಬೇಕೆಂದು ಒತ್ತಾಯಿಸುತ್ತೇವೆ. ಹಾಗೆಯೇ ನಾಡಿನ ಎಲ್ಲಾ ಮನೆಗಳಿಗೂ ಬಸವಾದಿ ಶರಣರ ವಚನಗಳನ್ನು ತಲುಪಿಸಿ ‘ಗೃಹ – ಜ್ಯೋತಿ ಬೆಳಗುವ ಕೆಲಸ ಆಗಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
4. ಅನುಭವ ಮಂಟಪವು ಸ್ಥಾವರ ಅಲ್ಲ, ಅದು ಜಂಗಮಶೀಲ. ಈ ಪರಿಕಲ್ಪನೆ ನೆಲೆಯಲ್ಲಿ ನಮ್ಮ ಸಂಘಟನೆಯು ಇದನ್ನು ಸದಾ ಕ್ರಿಯಾಶೀಲವಾಗಿಡಲು ಬಯಸುತ್ತದೆ. ಹನ್ನೆರಡನೇ ಶತಮಾನದ ಶರಣರ ಪ್ರಜಾಸತ್ತಾತ್ಮಕ ಆಶಯಗಳ ದಾರಿಯಲ್ಲಿ ಈ ಸಂಘಟನೆಯನ್ನು ಸಂವಾದ, ವಿಚಾರ ಕಮ್ಮಟ ಸವಾಲುಗಳ ನಿವಾರಣೆ ಇತ್ಯಾದಿ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಮುನ್ನಡೆಸಲು ನಿರ್ಣಯಿಸುತ್ತದೆ.
ಇದನ್ನೂ ಓದಿರಿ: ಬಸವತತ್ವಗಳ ಪ್ರಚಾರಕ್ಕೆ ರೂಪುರೇಷೆ: ’ಅನುಭವ ಮಂಟಪ’ ಸಭೆಯಲ್ಲಿ ಸ್ವಾರಸ್ಯಕರ ಚರ್ಚೆ
ಇದನ್ನೂ ಓದಿರಿ: ಮತ್ತೆ ಕಲ್ಯಾಣ ಮಾಡಿದಾಗಲೂ ದಾಳಿ ನಡೆದಿತ್ತು: ಅನುಭವ ಮಂಟಪದಲ್ಲಿ ಸಾಣೇಹಳ್ಳಿ ಶ್ರೀಗಳು ಹೇಳಿದ್ದೇನು?