ಖಾಸಗಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಬಾಲಕನೊಬ್ಬ ಶಾಲಾ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ. ಶಾಲೆಯ ಆಡಳಿತ ಮಂಡಳಿಯವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂಡಿಯ ಆರ್.ಎಂ ಸಹಾ ಶಾಲೆಯ ವಿದ್ಯಾರ್ಥಿ ಶಿವರಾಜ್ ಮೃತ ದುರ್ದೈವಿ. ಶಾಲೆಯ ಮೊದಲ ಮಹಡಿಯಿಂದ ನೀರಿನ ಟ್ಯಾಂಕ್ ಮೇಲೆ ಶಿವರಾಜ್ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಆ ವೇಳೆಗೆ ಆತ ಮೃತಪಟ್ಟಿದ್ದನ್ನು ಎಂದು ಹೇಳಲಾಗಿದೆ.
ಬಾಲಕ ಸಾವನ್ನಪ್ಪಿದ್ದರೂ ಶಾಲೆಯ ಆಡಳಿತ ಮಂಡಳಿಯವರು ಆತನ ಪೋಷಕರಿಗೆ ಮಾಹಿತಿ ನೀಡಿಲ್ಲ. ಬಾಲಕ ಆಯತಪ್ಪಿ ಬಿದ್ದಿದ್ಧಾನೆ. ಆಸ್ಪತ್ರೆಗೆ ಬನ್ನಿ ಎಂದಷ್ಟೇ ಹೇಳಿದ್ದಾರೆ. ಪೋಷಕರು ಆಸ್ಪತ್ರೆಗೆ ಬಂದು ವಿಚಾರಿಸಿದಾಗ, ಬಾಲಕ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಕನ ಪೋಷಕರು ಮತ್ತು ಸಂಬಂಧಿಗಳು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪೋಷಕರು ಆಸ್ಪತ್ರೆಗೆ ಬರುವ ಮುನ್ನವೇ ಶಾಲೆಯ ಆಡಳಿತ ಮಂಡಳಿಯವರು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಶಾಲೆಗೆ ಇಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.