ಆಸ್ತಿಗಾಗಿ ತಂದೆಯ ಕಣ್ಣುಗಳನ್ನೇ ಕಿತ್ತು ವಿಕೃತಿ ಮೆರೆದಿದ್ದ ಮಗನಿಗೆ 57ನೇ ಸಿಸಿಎಚ್ ನ್ಯಾಯಾಲಯ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಜತೆಗೆ ₹40 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ನ್ಯಾಯಾಧೀಶ ಟಿ.ಗೋವಿಂದಯ್ಯ ಅವರು ಆರೋಪಿ ಚೇತನ್ ಅಲಿಯಾಸ್ ಅಭಿಷೇಕ್(48) ಎಂಬುವವರಿಗೆ ಈ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಕೆ.ಎಸ್.ವೀಣಾ ಅರ್ಜಿದಾರರ ಪರ ವಾದ ಮಾಡಿದ್ದರು.
2018ರ ಆ.29ರಂದು ಬೆಂಗಳೂರಿನ ಶಾಕಾಂಬರಿನಗರದಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಮೇಲೆ ಎಫ್ಐಆರ್ ದಾಖಲಾಗಿತ್ತು. ಬಳಿಕ, ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಆದರೆ, ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆ, ಜೆ.ಪಿ.ನಗರ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಏನಿದು ಪ್ರಕರಣ?
ವಯಸ್ಸಾದಾಗ ಮಕ್ಕಳೇ ನಮಗೆ ನೆರವಾಗುತ್ತಾರೆ ಎಂಬುವುದು ತಂದೆ-ತಾಯಿ ಆಶಯ. ಆದರೆ, ಈ ಪ್ರಕರಣದಲ್ಲಿ ಆಸ್ತಿ ವಿಚಾರಕ್ಕೆ ಮಗನೊಬ್ಬ ತಂದೆಯ ಎರಡು ಕಣ್ಣುಗಳನ್ನು ಕಿತ್ತು ವಿಕೃತಿ ಮೆರೆದಿದ್ದಾನೆ. ಜತೆಗೆ ಅವರನ್ನು ಕತ್ತು ಹಿಸುಕಿ ಸಾಯಿಸಲು ಮುಂದಾಗಿದ್ದಾನೆ.
ಬೆಂಗಳೂರಿನ ಬನಶಂಕರಿ ಸಮೀಪದ ಶಾಕಾಂಬರಿ ನಗರದಲ್ಲಿ 2018ರ ಆ.29ರಂದು ಈ ಘಟನೆ ನಡೆದಿತ್ತು. ಆಸ್ತಿ ವಿಚಾರಕ್ಕೆ ತಂದೆ ಪರಮೇಶ್ ಮತ್ತು ಪುತ್ರ ಚೇತನ್ ನಡುವೆ ಜಗಳವಾಗಿತ್ತು. ಚೇತನ್ ತನ್ನ ಬೆರಳಿನಿಂದ ತಂದೆಯ ಕಣ್ಣಿನ ಗುಡ್ಡೆಯನ್ನು ಕಿತ್ತು ಹಾಕಿದ್ದನು. ಮತ್ತೊಂದು ಕಣ್ಣಿಗೂ ಹಾನಿ ಮಾಡಿದ್ದನು.
ಪರಮೇಶ್ ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರು ನಿವೃತ್ತಿಯ ಜೀವನ ನಡೆಸುತ್ತಿದ್ದು, ಶಾಕಾಂಬರಿ ನಗರದಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು.
ಪರಮೇಶ್ ಅವರ 2ನೇ ಮಗ ಚೇತನ್ ಮಾದಕ ವಸ್ತುಗಳ ದಾಸನಾಗಿದ್ದನು. ಹಣ ನೀಡುವಂತೆ ಪೋಷಕರನ್ನು ಆಗಾಗ ಪೀಡಿಸುತ್ತಿದ್ದನು. ಘಟನೆ ದಿನ ಹಣ ಮತ್ತು ಆಸ್ತಿ ವಿಚಾರಕ್ಕೆ ಅಪ್ಪ-ಮಗನ ನಡುವೆ ಜಗಳ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿನ ಸಂಪ್ ಸ್ವಚ್ಛತೆಗಿಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು
ಆರೋಪಿ ಚೇತನ್ ತಂದೆ ಪರಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಕಣ್ಣಿಗೆ ಕೈ ಹಾಕಿ ಗುಡ್ಡೆಯನ್ನು ತೆಗೆದಿದ್ದಾರೆ. ಮತ್ತೊಂದು ಕಣ್ಣಿಗೂ ಹಲ್ಲೆ ಮಾಡಿದ್ದಾರೆ. ನಂತರ ಮನೆಯಿಂದ ಪರಾರಿಯಾಗಲು ಯತ್ನಿಸಿದ ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.