ಜೀವನೋಪಾಯಕ್ಕಾಗಿ ಲಕ್ಷಾಂತರ ಜನ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ಟ್ಯಾಕ್ಸಿ ಓಡಿಸುತ್ತಾರೆ. ನಿತ್ಯ ಬೆಂಗಳೂರು ನಗರ ಮತ್ತು ಏರ್‌ಪೋರ್ಟ್ ನಡುವೆ ಸೇವೆ ಒದಗಿಸುವ ಚಾಲಕರಿಗೆ ಏರ್‌ಪೋರ್ಟ್ ಕ್ಯಾಂಟೀನ್‌ನಲ್ಲಿ ಒಂದೊಳ್ಳೆ ಊಟವೂ ಸಿಗುತ್ತಿಲ್ಲ. ಕಷ್ಟ ಪಟ್ಟು ದುಡಿಯುತ್ತಿದ್ದೇವೆ ಒಳ್ಳೆ ಊಟ ತಿನ್ನೋಣವೆಂದು ಅಲ್ಲಿನ ಕ್ಯಾಂಟೀನ್‌ಗೆ ಹೋದರೆ, ಅಲ್ಲಿ ಮೂರು ನಾಲ್ಕು ದಿನದ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ಸಾವಿರಾರು ಟ್ಯಾಕ್ಸಿಗಳು ಸಂಚಾರ ನಡೆಸುತ್ತವೆ. ನಿಲ್ದಾಣದ ವ್ಯಾಪ್ತಿಗೆ ಬರುವ ಈ ಕ್ಯಾಂಟೀನ್‌ನಲ್ಲಿ ನಿತ್ಯ 5 ರಿಂದ 7 ಸಾವಿರ ಟ್ಯಾಕ್ಸಿ ಚಾಲಕರು ಆಹಾರ ಸೇವಿಸುತ್ತಾರೆ. ಬಾಡಿಗೆಗಾಗಿ ಕಾದು ಕುಳಿತು ಹಸಿವಾದರೆ, ಈ ಕ್ಯಾಂಟೀನ್ ಒಂದನ್ನೇ ಅವಲಂಬಿಸಿರುವ ಟ್ಯಾಕ್ಸಿ ಚಾಲಕರಿಗೆ ಗುಣಮಟ್ಟದ ಆಹಾರ ದೊರೆಯದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಏರ್‌ಪೋರ್ಟ್ ಪಾರ್ಕಿಂಗ್ 7 ರಲ್ಲಿರುವ ಕ್ಯಾಂಟೀನನ್ನು ಗುತ್ತಿಗೆ ಪಡೆದಿರುವವರು ನಿತ್ಯ ಕಳಪೆ ಆಹಾರ ನೀಡಿ, ಚಾಲಕರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ಕ್ಯಾಂಟೀನ್‌ನಲ್ಲಿ ರಾತ್ರಿ ಉಳಿದ ಅನ್ನವನ್ನೆ ಬಿಸಿ ಮಾಡಿ ಬೆಳಗ್ಗೆ ಅದನ್ನೇ ತಿನ್ನಲು ಚಾಲಕರಿಗೆ ನೀಡುತ್ತಿದ್ದಾರೆ. ಈ ಹಿಂದೆ ಕಳಪೆ ಆಹಾರದ ಬಗ್ಗೆ ಕ್ಯಾಂಟೀನ್ ಉಸ್ತುವಾರಿಗಳಿಗೆ ಚಾಲಕರು ತಿಳಿಸಿದ್ದರು. ಬುಧವಾರ ಇಡ್ಲಿ, ಚಟ್ನಿ ತಿಂದ ಚಾಲಕರು ಮತ್ತೆ ಕಳಪೆ ಆಹಾರ ಕಂಡು ರೊಚ್ಚಿಗೆದ್ದಿದ್ದಾರೆ. ಈ ಹಿಂದೆ ಹೇಳಿದ್ದರೂ ಕ್ಯಾಂಟೀನ್‌ನಲ್ಲಿ ಬದಲಾವಣೆ ಕಾಣದ ಹಿನ್ನೆಲೆ, ನ.22ರಂದು ನೂರಾರು ಟ್ಯಾಕ್ಸಿ ಚಾಲಕರು ಸೇರಿ ಕ್ಯಾಂಟೀನಲ್ಲಿದ್ದ ಇಡ್ಲಿ, ಚಟ್ನಿ, ಮೊಸರನ್ನ, ಚಪಾತಿ ಸೇರಿದಂತೆ ಇನ್ನಿತರ ತಿಂಡಿಗಳನ್ನು ಹೊರಗಡೆ ತಂದಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಟ್ಯಾಕ್ಸಿ ಚಾಲಕರ ಈ ಆಕ್ರೋಶದ ಬೆನ್ನಲ್ಲೇ, ಆಹಾರ ಇಲಾಖೆ ಅಧಿಕಾರಿ ಪ್ರವೀಣ್ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಯಾರಾಗಿದ್ದ ತಿಂಡಿ ಹಾಗೂ ಆಹಾರ ಪದಾರ್ಥಗಳ ಸ್ಯಾಂಪಲ್ ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಿದ್ದಾರೆ.
ಜತೆಗೆ ಇಂತಹ ಕಳಪೆ ಆಹಾರ ಕೊಡುವವವರ ಟೆಂಡರ್ ರದ್ದು ಮಾಡಿ ಉತ್ತಮ ಆಹಾರ ನೀಡುವವರಿಗೆ ಟೆಂಡರ್ ನೀಡುವಂತೆ ಏರ್‌ಪೋರ್ಟ್ ಅಧಿಕಾರಿಗಳಿಗೆ ಟ್ಯಾಕ್ಸಿ ಚಾಲಕರು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆಸ್ತಿ ಕಲಹಕ್ಕೆ ತಂದೆಯ ಕಣ್ಣುಗಳನ್ನು ಕಿತ್ತಿದ್ದ ಮಗನಿಗೆ 9 ವರ್ಷ ಜೈಲು ಶಿಕ್ಷೆ
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿ ಟ್ಯಾಕ್ಸಿ ಚಾಲಕ ಬಸವರಾಜು, “ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಐದು ಬಾರಿ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ಏರ್‌ಪೋರ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನಿನ್ನೆಯೂ ಹಿಂದಿನ ದಿನ ಉಳಿದ ಅನ್ನಕ್ಕೆ ಒಗ್ಗರಣೆ ಹಾಕಿ ಮರುದಿನ ಚಾಲಕರಿಗೆ ತಿನ್ನಲು ನೀಡುತ್ತಾರೆ. ಚಟ್ನಿ, ಇಡ್ಲಿ ಸೇರಿದಂತೆ ಕ್ಯಾಂಟೀನ್‌ನಲ್ಲಿ ತಯಾರು ಮಾಡುವ ಎಲ್ಲ ತಿಂಡಿ, ಊಟ ಕಳಪೆ ಗುಣಮಟ್ಟದಾಗಿದೆ. ಇಲ್ಲಿ ತಿಂಡಿ ಮತ್ತು ಊಟದ ದರ ₹40 ರಿಂದ ಆರಂಭವಾಗುತ್ತದೆ” ಎಂದರು.
ಮತ್ತೋರ್ವ ಟ್ಯಾಕ್ಸಿ ಚಾಲಕ ನಾಗರಾಜು ಈ ದಿನ.ಕಾಮ್ ಜತೆಗೆ ಮಾತನಾಡಿ, “ಏರ್‌ಪೋರ್ಟ್‌ಗೆ ಬಾಡಿಗೆ ಬಿದ್ದರೆ, ಮತ್ತೆ ವಾಪಸ್ ಬೆಂಗಳೂರು ನಗರಕ್ಕೆ ಹೋಗಬೇಕೆಂದರೆ, ಪಾಳಿಯ ಪ್ರಕಾರ ನಂಬರ್(ಬಾಡಿಗೆ) ಬೀಳುತ್ತದೆ. ಅಲ್ಲಿಯವರೆಗೂ ನಾವು ಏರ್‌ಪೋರ್ಟ್‌ನಲ್ಲೇ ಇರಬೇಕಾಗುತ್ತದೆ. ಈ ವೇಳೆ, ಹೊಟ್ಟೆ ಹಸಿಯಿತೆಂದರೆ, ಕ್ಯಾಂಟೀನ್‌ಗೆ ಹೋಗಿ ಸ್ವಲ್ಪ ಏನಾದರೂ ತಿನ್ನೋಣ ಎಂದುಕೊಂಡರೆ, ಅಲ್ಲಿ ನೀಡುವ ಎಲ್ಲ ಆಹಾರವೂ ಸಂಪೂರ್ಣ ಕಳಪೆ ಗುಣಮಟ್ಟದಾಗಿದೆ. ಇದರಿಂದ ನಮ್ಮ ಆರೋಗ್ಯ ಕೂಡ ಹಾಳಾಗುತ್ತದೆ. ಸರ್ಕಾರ ಮತ್ತು ಏರ್‌ಪೋರ್ಟ್ ಅಧಿಕಾರಿಗಳು ಟ್ಯಾಕ್ಸಿ ಚಾಲಕ ಆರೋಗ್ಯದ ಬಗ್ಗೆ ಸ್ವಲ್ಪವಾದರೂ ಗಮನ ಹರಿಸಬೇಕು” ಎಂದರು.
ಕೆಂಪೇಗೌಡ ವಿಮಾನ ನಿಲ್ದಾಣ ನಿಯಮಿತ ರವರು ದುಬಾರಿ ಬಾಡಿಗೆ ವಶೀಲಿ ಮಾಡಿದರೆ, ಕ್ಯಾಂಟೀನ್ ರವರು ಏನು ಮಾಡುತ್ತಾರೆ. ಆಹಾರದ ಬೆಲೆ ಹೆಚ್ಚು ಮಾಡಬಾರದು. ಇಲ್ಲಿ ಮಾಡಿದ ಯಾವ ಅಡಿಗೆಯೂ ವ್ಯರ್ಥವಾಗದಂತೆ ಬಿಸಿ ಮಾಡಿ ಕೊಡುತ್ತಾರೆ.
ಪ್ರಾಧಿಕಾರದವರು ಬಾಡಿಗೆ ಪ್ರೀ ಕೊಡಬೇಕು. ಆಗ ಕ್ಯಾಂಟೀನ್ ರವರನ್ನು ಪ್ರಶ್ನೆ ಮಾಡಬಹುದು. ಟರ್ಮಿನಲ್ ಒಳಗಡೆ ಕಾಫಿಗೆ 200 ಕೀಳುತ್ತಾರೆ.