ಬೌದ್ಧಧಮ್ಮ ಸ್ವೀಕರಿಸುವಾಗ ಪ್ರತಿಜ್ಞೆ ಮಾಡುತ್ತಿರುವವರ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಉಮೇಶ್ ಶೆಟ್ಟಿ, “ಈ ಎಡಬಿಡಂಗಿಗಳಿಗೆ ಗಂಜಿ ಕಾಸು ಸಂಪಾದಿಸಲು ಹಿಂದೂ ಧರ್ಮದ ಹೆಸರೇ ಬೇಕು” ಎಂದು ಬರೆದಿದ್ದಾರೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧಧಮ್ಮ ಸ್ವೀಕರಿಸುವ ವೇಳೆಯಲ್ಲಿ ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದ 22 ಪ್ರತಿಜ್ಞೆಗಳನ್ನು ಪುನುರುಚ್ಚರಿಸಿದವರನ್ನು “ಎಡಬಿಡಂಗಿಗಳು” ಎಂದು ಜರಿದು ಬೆಂಗಳೂರು ಕಂಬಳದ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೌದ್ಧಧಮ್ಮ ಸ್ವೀಕರಿಸುವಾಗ ಪ್ರತಿಜ್ಞೆ ಮಾಡುತ್ತಿರುವವರ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಉಮೇಶ್ ಶೆಟ್ಟಿ, “ಈ ಎಡಬಿಡಂಗಿಗಳಿಗೆ ಗಂಜಿ ಕಾಸು ಸಂಪಾದಿಸಲು ಹಿಂದೂ ಧರ್ಮದ ಹೆಸರೇ ಬೇಕು. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಂತಹ ಹಿಂದೂ ವಿರೋಧಿಗಳು ತಲೆ ಎತ್ತುತ್ತಲೇ ಇರುತ್ತವೆ. ಕಾಂಗ್ರೆಸ್ ಸರ್ಕಾರದ ಮೌನ ಹಿಂದೂಗಳ ತಾಳ್ಮೆ ಪರೀಕ್ಷಿಸುವಂತೆ ಮಾಡುತ್ತಿದೆ” ಎಂದಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷರೂ ಆಗಿರುವ ಉಮೇಶ್ ಶೆಟ್ಟಿ, ಬಿಬಿಎಂಪಿ ನಿಕಟಪೂರ್ವ ಸದಸ್ಯರೂ ಹೌದು. ಕಳೆದ ವಿಧಾನಸಭಾ ಚುನಾವಣೆ ವೇಳೆ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿದ್ದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೋಧನೆಗಳನ್ನು ಟೀಕಿಸಿರುವ ಅವರು, “ಕಾಂಗ್ರೆಸ್ ಸರ್ಕಾರಕ್ಕೂ ಅಂಬೇಡ್ಕರ್ ಪ್ರತಿಜ್ಞೆಗಳಿಗೂ ತಳುಕು ಹಾಕಿರುವುದು” ಪೋಸ್ಟ್‌ನಲ್ಲಿ ಕಂಡು ಬರುತ್ತಿದೆ.
ಈ ಕುರಿತು ಈದಿನ.ಕಾಂ ಉಮೇಶ್ ಶೆಟ್ಟಿಯವರನ್ನು ಸಂಪರ್ಕಿಸಿದಾಗ ಗೊಂದಲಕಾರಿಯಾಗಿ ಪ್ರತಿಕ್ರಿಯೆ ನೀಡಿದರು. “ಅಂಬೇಡ್ಕರ್ ಅವರ ಪ್ರತಿಜ್ಞೆಗಳನ್ನು ಯಾವತ್ತೂ ನಾವು ಒಪ್ಪುತ್ತೇವೆ. ಅವರ ಪ್ರತಿಜ್ಞೆಗಳಿಗೆ ನಮ್ಮ ವಿರೋಧ ಯಾವತ್ತೂ ಇಲ್ಲ. ನಾವು ಕೂಡ ಅಂಬೇಡ್ಕರ್ ಅವರ ಅನುಯಾಯಿಗಳೇ. ಸಂವಿಧಾನದ ಬಗ್ಗೆ ನಮಗೂ ಬಹಳಷ್ಟು ಗೌರವವಿದೆ. ಎಡಬಿಡಂಗಿ ಎಂದು ಹೇಳುವಾಗ ಯಾರದಾದರೂ ಹೆಸರು ಉಲ್ಲೇಖ ಮಾಡಿದ್ದೇವಾ? ಪ್ರತಿಜ್ಞೆ ಸ್ವೀಕಾರ ಮಾಡಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದು ತಪ್ಪೆಂದು ಯಾವುದೇ ಕಾರಣಕ್ಕೂ ಹೇಳುವುದೂ ಇಲ್ಲ. ನಾವು ಕಾಂಗ್ರೆಸ್ ಸರ್ಕಾರಕ್ಕೆ ಹೇಳಿದ್ದೇವಷ್ಟೇ” ಎಂದು ತಿಳಿಸಿದರು.
ಮೊದಲು ಏನೇನೋ ಪ್ರಶ್ನೆ ಮಾಡಿ, ನಂತರ “ಅದು ಸೋಷಿಯಲ್ ಮೀಡಿಯಾದಲ್ಲೇ ಬಂದದ್ದು, ನಾವು ಹಾಕಿದ್ದಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬಂದಿದ್ದನ್ನು ಯಾರೋ ಪೋಸ್ಟ್ ಮಾಡಿರುತ್ತಾರೆ ಅಷ್ಟೇ. ನಾನು ಅದನ್ನು ನೋಡುತ್ತೇನೆ. ಅದರಲ್ಲಿ ತಪ್ಪಿದ್ದರೆ ತೆಗೆಯುತ್ತೇನೆ. ಅದಕ್ಕೇನೂ ಅಭ್ಯಂತರವಿಲ್ಲ. ಆ ಪೋಸ್ಟ್ ಅನ್ನು ನಾನು ನೋಡಿಲ್ಲ. ಅದ್ಯಾವುದನ್ನೂ ಗಮನಿಸಿಲ್ಲ. ನಾನು ಕಂಬಳ ಕಾರ್ಯಕ್ರಮದಲ್ಲಿ ಬ್ಯುಸಿಯಲ್ಲಿದ್ದೇನೆ” ಎಂದರು.
ಜಾತಿ ಅಸ್ಪೃಶ್ಯತೆಯ ಕೂಪವಾಗಿದ್ದ ಹಿಂದೂ ಧರ್ಮದಿಂದಾಗಿ ನೊಂದು, “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯುವುದಿಲ್ಲ” ಎಂದು ಅಂಬೇಡ್ಕರ್ ಅವರು ಘೋಷಿಸಿಕೊಂಡಿದ್ದರು. ಅಂತಿಮವಾಗಿ ಅಕ್ಟೋಬರ್ 14, 1956ರಂದು ನಾಗಪುರದಲ್ಲಿ ಬೌದ್ಧಧಮ್ಮಕ್ಕೆ ಮರಳಿದ ಅವರು, ತಮ್ಮ ಅನುಯಾಯಿಗಳಿಗೆ 22 ಪ್ರತಿಜ್ಞೆಗಳನ್ನು ಬೋಧಿಸಿದ್ದರು. ಲೇಖಕರಾದ ರಘೋತ್ತಮ ಹೊ.ಬ. ಅವರು 22 ಪ್ರತಿಜ್ಞೆಗಳನ್ನು ಹೀಗೆ ಅನುವಾದಿಸಿದ್ದಾರೆ:
- ನಾನು ಬ್ರಹ್ಮ, ವಿಷ್ಣು, ಮಹೇಶ್ವರ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.
2) ನಾನು ರಾಮ ಮತ್ತು ಕೃಷ್ಣ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.
3) ನಾನು ಗಣಪತಿ ಮತ್ತು ಗೌರಿ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.
4) ನಾನು ದೇವರ ಅವತಾರಗಳ ಸಿದ್ಧಾಂತದಲ್ಲಿ ನಂಬಿಕೆ ಇಡುವುದಿಲ್ಲ.
5)ನಾನು ಬುದ್ಧ ವಿಷ್ಣುವಿನ ಅವತಾರ ಎಂಬುದನ್ನು ನಂಬುವುದಿಲ್ಲ.
6) ನಾನು ಯಾವುದೇ ಶ್ರಾದ್ಧ ಮತ್ತು ಪಿಂಡ ದಾನಗಳನ್ನು ಮಾಡುವುದಿಲ್ಲ.
7) ನಾನು ಬೌದ್ಧ ಧರ್ಮಕ್ಕೆ ಕೇಡು ತರುವ ಯಾವುದೇ ಕ್ರಿಯೆಗಳನ್ನು ಮಾಡುವುದಿಲ್ಲ.
8) ನಾನು ಬ್ರಾಹ್ಮಣರ ಮೂಲಕ ಯಾವುದೇ ಧಾರ್ಮಿಕ ಕ್ರಿಯೆಗಳನ್ನು ನಡೆಸುವುದಿಲ್ಲ.
9) ನಾನು ಮನುಷ್ಯರೆಲ್ಲ ಸಮಾನರು ಎಂಬುದನ್ನು ನಂಬುತ್ತೇನೆ.
10) ನಾನು ಸಮಾನತೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತೇನೆ.
11) ನಾನು ಬುದ್ಧರ ಅಷ್ಟಾಂಗ ಮಾರ್ಗವನ್ನು ಪಾಲಿಸುತ್ತೇನೆ.
12) ನಾನು ಬುದ್ಧರ ಹತ್ತು ಪಾರಮಿತ ತತ್ವಗಳನ್ನು ಅನುಸರಿಸುತ್ತೇನೆ.
13) ನಾನು ಎಲ್ಲಾ ಜೀವರಾಶಿಗಳ ಮೇಲೆ ಸಹಾನುಭೂತಿ ತೋರುತ್ತೇನೆ ಮತ್ತು ಅವುಗಳ ಮೇಲೆ ದಯೆ ಇಟ್ಟು ಅವುಗಳನ್ನು ಕಾಪಾಡುತ್ತೇನೆ.
14) ನಾನು ಕಳ್ಳತನ ಮಾಡುವುದಿಲ್ಲ.
15) ನಾನು ಸುಳ್ಳು ಹೇಳುವುದಿಲ್ಲ
16) ನಾನು ವ್ಯಭಿಚಾರ ಮಾಡುವುದಿಲ್ಲ
17) ನಾನು ಮದ್ಯಪಾನ ಮಾಡುವುದಿಲ್ಲ.
18) ನಾನು ಬೌದ್ಧ ಧರ್ಮದ ಮೂರು ಮೂಲಭೂತ ತತ್ವ (ಪ್ರಜ್ಞೆ, ಕರುಣೆ ಮತ್ತು ಮೈತ್ರಿ)ಗಳ ಸಮರಸವಾದ ಸಂಯೋಜನೆಯನ್ನು ಸಾಧಿಸಲು ಜೀವನ ಪೂರ ಯತ್ನಿಸುತ್ತೇನೆ.
19) ಈ ಮೂಲಕ ನಾನು ಮನುಕುಲದ ಏಳಿಗೆಗೆ ತಡೆಯಾಗಿರುವ, ಮನುಷ್ಯ ಮನುಷ್ಯರ ನಡುವೆ ಭೇದ ಎಣಿಸುವ, ನನ್ನನ್ನು ಕೀಳು ಎಂದು ಪರಿಗಣಿಸುವ ನನ್ನ ಹಳೆಯ ಧರ್ಮ ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇನೆ.
20) ಬೌದ್ಧ ಧರ್ಮವೇ ಸದ್ಧಮ್ಮ ಎಂಬುದನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ.
21) ಈ ಹಿನ್ನೆಲೆಯಲ್ಲೇ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಮತ್ತು ಇದರಿಂದ ನನಗಿಂದು ಮರುಜನ್ಮ ಪಡೆದಂತೆ ಆಗಿದೆ.
22) ಒಟ್ಟಾರೆ ಇನ್ನು ಮುಂದೆ ನಾನು ಬುದ್ಧರ ಬೋಧನೆಯ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇನೆ.
(ಆಧಾರ: Babasaheb Ambedkar writings and speeches, vol.17, Part 3, Pp.530)

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.