ವಸತಿ ನಿಲಯದ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಹಸಿವಿನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸರೇ ಅಡುಗೆ ಮಾಡಿ ಊಟ ಬಡಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿರುವ ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಘಟನೆ ನಡೆದಿದೆ. ಬುಧವಾರ ಸಂಜೆ ಅಡುಗೆ ಮಾಡದೆ, ಹಾಸ್ಟಲ್ನಲ್ಲೂ ಇರದೇ ಅಡುಗೆ ಸಿಬ್ಬಂದಿಗಳು ಹಾಗೂ ವಾರ್ಡನ್ ಹೊರ ಹೋಗಿದ್ದರು ಎಂದು ಆರೋಪಿಸಲಾಗಿದೆ.
ಹಸಿವಿನಿಂದ ವಿದ್ಯಾರ್ಥಿಗಳು ವಾರ್ಡನ್ ಪ್ರಕಾಶ್ ಅವರಿಗೆ ಕರೆ ಮಾಡಿದರೂ, ಅವರು ಸರಿಯಾಗಿ ಪ್ರತಿಕ್ರಿಯೆ ನಿಡಿಲ್ಲ. ಹಸಿವಿನಿಂದ ಬೇಸತ್ತ ವಿದ್ಯಾರ್ಥಿಗಳು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಪೊಲೀಸರು ಕರೆ ಮಾಡಿದರೂ ವಾರ್ಡನ್ ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ಆರೋಪಿಸಲಾಗಿದೆ.
ಹಾಸ್ಟಲ್ಗೆ ಬಂದ ಪಿಎಸ್ಐ ಹೊಸ್ಕೇರಪ್ಪ ಮತ್ತು ಪೊಲೀಸ್ ಸಿಬ್ಬಂದಿಗಳು ತಾವೇ ಅಡುಗೆ ಮಾಡಿ ವಿದ್ಯಾರ್ಥಿಗಳಿಗೆ ಊಟ ಬಡಿಸಿದ್ದಾರೆ.
ಪೊಲೀಸರ ನೆರವಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ವಿರುದ್ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.