ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ. ಇದೀಗ ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಸೂಚಿಸಿದೆ. ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪಾಲಿಸುವಂತೆ ಹೇಳಿ ನವೆಂಬರ್ 23ರಿಂದ ಡಿಸೆಂಬರ್ 23ರವರಗೆ 2700 ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿದೆ.
ದೆಹಲಿಯಲ್ಲಿ ಗುರುವಾರ ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆ ನಡೆದಿದ್ದು, ತಮಿಳುನಾಡಿಗೆ ನೀರು ಬಿಡುಗಡೆ ಸಂಬಂಧ ಚರ್ಚೆ ನಡೆದು ಪ್ರತಿನಿತ್ಯ 2,700 ಕ್ಯೂಸೆಕ್ ನೀರು ಬಿಡುವಂತೆ ಪ್ರಾಧಿಕಾರ ಸೂಚನೆ ನೀಡಿದೆ.
ಬಾಕಿ ಇರುವ 7.5 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಾಕಿ ಬಿಡಬೇಕಾಗಿದ್ದ ನೀರನ್ನು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸೂಚನೆ ನೀಡಿದೆ. ಈ ಮೂಲಕ ಸುಪ್ರೀಂ ಕೋರ್ಟ್ನ ಆದೇಶವನ್ನು ಪಾಲಿಸುವಂತೆ ಪ್ರಾಧಿಕಾರವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಈ ಸುದ್ದಿ ಓದಿದ್ದೀರಾ? ಸಿಖ್ ಪ್ರತ್ಯೇಕತಾವಾದಿಯ ಕೊಲ್ಲುವ ಸಂಚನ್ನು ವಿಫಲಗೊಳಿಸಿ ಭಾರತಕ್ಕೆ ಎಚ್ಚರಿಕೆ ನೀಡಿದ ಅಮೆರಿಕ
ಗುರುವಾರ ಬೆಳಗ್ಗೆ 11.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಬಾಕಿ ನೀರು ಬಿಡಲು ತಮಿಳುನಾಡು ಆಗ್ರಹಿಸಿತು. ಹಳೇ ಬಾಕಿ 11 ಟಿಎಂಸಿ ನೀರು ಬಿಡಲು ಬಾಕಿ ಇದೆ. ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತು.
ಸದ್ಯ ತಮಿಳುನಾಡಿನಲ್ಲಿ ವಿಪರೀತ ಮಳೆಯಾಗುತ್ತಿದ್ದು, ಅದನ್ನು ಶೇಖರಣೆ ಮಾಡುವ ಬಗ್ಗೆ ತಮಿಳುನಾಡು ಸರಕಾರ ಯಾವುದೇ ಚಿಂತನೆ ನಡೆಸುತ್ತಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಅನಿಯಂತ್ರಿತ ನೀರು ನದಿ ಪಾತ್ರ ಸೇರುತ್ತಿದೆ. 3,000 ಸಾವಿರ ಕ್ಯೂಸೆಕ್ ಅನಿಯಂತ್ರಿತ ನೀರು ಯಾವುದೇ ಅಡೆತಡೆ ಇಲ್ಲದೇ ತಮಿಳುನಾಡು ಸೇರುತ್ತಿದೆ.
ತಮಿಳುನಾಡಿನಲ್ಲಿ ಮಳೆ ಹೆಚ್ಚಾದರೆ ಪುನಃ ನೀರು ಕರ್ನಾಟಕ ಪಡೆಯಲು ಸಾಧ್ಯ ಇಲ್ಲ. ಅಲ್ಲದೇ ಮೆಟ್ಟೂರು ಜಲಾಶಯದಿಂದ ತಮಿಳುನಾಡು ತುಂಬ ಕಡಿಮೆ ಪ್ರಮಾಣದಲ್ಲಿ ನೀರು ಬಿಡುತ್ತಿದೆ. ಹಾಗಾಗಿ ಕರ್ನಾಟಕದಿಂದ ಪುನಃ ನೀರು ಬಿಡಲು ಸಾಧ್ಯವಿಲ್ಲ ಎಂಬುದು ಕರ್ನಾಟಕದ ವಾದವಾಗಿದೆ. ಕರ್ನಾಟಕದಿಂದ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ವಾದ ಮಂಡಿಸಲು ರಾಜ್ಯದ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.