- ‘ಅನೇಕ ಕಪ್ಪು ಚುಕ್ಕೆಗಳು ಕಾಂಗ್ರೆಸ್ ಸರ್ಕಾರಕ್ಕೆ ಮೆತ್ತಿಕೊಂಡಿವೆ’
- ‘ಸರ್ಕಾರದ ಕಿವಿ ಹಿಂಡುವ ಕೆಲಸ ಸದನದಲ್ಲಿ ಮಾಡುತ್ತೇವೆ’
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಅಭಿವೃದ್ಧಿ ಕಾರ್ಯಗಳು ಏನೂ ಆಗಿಲ್ಲ. ಅನೇಕ ಕಪ್ಪು ಚುಕ್ಕೆಗಳು ಸರ್ಕಾರಕ್ಕೆ ಮೆತ್ತಿಕೊಂಡಿವೆ. ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಸದನದಲ್ಲಿ ನಾವೆಲ್ಲ ಮಾಡುತ್ತೇವೆ. ಅದಕ್ಕೂ ಬಗ್ಗದೇ ಹೋದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ ಎಚ್ಚರಿಸಿದರು.
ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಆರ್ ಅಶೋಕ್ ಅವರು ವಿಧಾನಸೌಧದ ಅಧಿಕೃತ ವಿರೋಧ ಪಕ್ಷ ನಾಯಕರ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರವೇಶಿಸಿ, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ನಮ್ಮ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ನಡ್ಡಾ, ಅಮೀತ್ ಶಾ, ಸಂತೋಷ್ ಜೀ, ಬಿಎಸ್ ಯಡಿಯೂರಪ್ಪ, ಬೊಮ್ಮಾಯಿ ಗಣ್ಯರೆಲ್ಲ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ನನ್ನನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ವಿಪಕ್ಷ ನಾಯಕರ ಕಚೇರಿಗೆ ಇಂದು ಪೂಜೆ ಮಾಡಿ ವಿದ್ಯುಕ್ತವಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ” ಎಂದರು.
”ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಅತೀ ಆತುರವಾಗಿ ಕಾಂತರಾಜ ವರದಿ ವರದಿ ಸ್ವೀಕಾರಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಕಾಂತರಾಜ ವರದಿ ಮುಂದಿಟ್ಟು ರಾಜಕಾರಣ ಮಾಡಲು ಹೊರಟಿದೆ” ಎಂದು ಟೀಕಿಸಿದರು.
“ವಿವಾದಿತ ಕಾಂತರಾಜು ವರದಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾತುರಿ ತೋರುತ್ತಿರುವುದು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ವರದಿಯ ಮೂಲಪ್ರತಿ ಕಾಣೆಯಾಗಿದೆ, ಅದಕ್ಕೆ ಕಾರ್ಯದರ್ಶಿ ಸಹಿ ಇಲ್ಲ, ಇದೊಂದು ಅವೈಜ್ಞಾನಿಕ ವರದಿ ಎಂದು ಅನೇಕ ಸಮುದಾಯಗಳು ಆರೋಪಿಸಿವೆ, ಸಚಿವ ಸಂಪುಟದಲ್ಲೇ ಸಹಮತ ಇಲ್ಲ. ಇಂತಹ ಸಂದರ್ಭದಲ್ಲಿ ವಿವಾದಿತ ವರದಿ ಪಡೆಯಲು ಆತುರ ಏಕೆ” ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬ್ರ್ಯಾಂಡ್ ಬೆಂಗಳೂರಿನಲ್ಲಿ ಬಡವರ ಪ್ರಾಣಕ್ಕೆ ಗ್ಯಾರಂಟಿಯಿಲ್ಲ
“ಸರಕಾರದ ಕೋಟಿಗಟ್ಟಲೇ ಹಣ ಕೊಟ್ಟು ಸಿದ್ಧಪಡಿಸಿದ ವರದಿ ಕಳುವಾಗಲು ಯಾರು ಕಾರಣ? ಅದರ ಹೊಣೆ ಯಾರದ್ದು? ಕಳುವು ಪ್ರಕರಣದ ಬಗ್ಗೆ ಏಕೆ ತನಿಖೆ ನಡೆಸಲಿಲ್ಲ. ಮೂಲ ವರದಿ ಕಳುವಾಗಿದ್ದರೂ ಅದರ ದತ್ತಾಂಶ ಇದೆ ಎಂದು ಪರಿಷ್ಕೃತ ವರದಿ ಸಿದ್ಧಪಡಿಸುವುದು ಎಷ್ಟು ಸರಿ? ಹತ್ತು ವರ್ಷಗಳ ಹಿಂದಿನ ಜನಸಂಖ್ಯೆಗೂ, ಈಗಿನ ಜನಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ. ಸಾರ್ವಜನಿಕರಿಂದಲೂ ತಮ್ಮ ಮನೆಗಳಿಗೆ ಸಮೀಕ್ಷೆ ನಡೆಸುವವರು ಬಂದಿರಲಿಲ್ಲ ಎಂದು ವ್ಯಾಪಕ ದೂರುಗಳು ಬಂದಿವೆ. ಇಷ್ಟಾದರೂ ವರದಿ ಸ್ವೀಕರಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಆತುರ ತೋರುತ್ತಿರುವುದು ಜನರಲ್ಲಿ ಸಂಶಯ ಹುಟ್ಟು ಹಾಕಿದೆ” ಆರೋಪಿಸಿದರು.
ಪಾರದರ್ಶಕತೆ ಪ್ರದರ್ಶಿಸಿ
“ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬ ವಿಷಯದಲ್ಲಿ ನಮ್ಮ ಸಹಮತವಿದೆ. ಆದರೆ ಅವೈಜ್ಞಾನಿಕ, ವಿವಾದಿತ ವರದಿ ಆಧರಿಸಿ ಕ್ರಮಕ್ಕೆ ಮುಂದಾದರೆ ನಮ್ಮ ವಿರೋಧವಿದೆ. ಒಂದು ವೇಳೆ ಇವರಿಗೆ ನಿಜವಾಗಿಯೂ ಮೀಸಲು ನೀಡುವ ವಿಷಯದಲ್ಲಿ ಬದ್ಧತೆ ಇದ್ದರೆ ಪಾರದರ್ಶಕವಾಗಿ ಮರು ಸಮೀಕ್ಷೆ ನಡೆಸಲಿ. ವಿರೋಧ ವ್ಯಕ್ತಪಡಿಸಿರುವ ಸ್ವಾಮೀಜಿಗಳು, ಮುಖಂಡರನ್ನು ಕರೆದು ಅಭಿಪ್ರಾಯ ಕೇಳಲಿ” ಎಂದು ಆಗ್ರಹಿಸಿದರು.
ಯಾರ ಮನೆಯಲ್ಲಿ ಕುಳಿತು ಬರೆದರು?
ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂಬ ಕಾಂತರಾಜು ಅವರ ಸ್ಪಷ್ಟನೆಗೆ ಪ್ರತಿಕ್ರಿಯಿಸಿ, “ಕಾರ್ಯದರ್ಶಿ ಅವರು ಏಕೆ ಸಹಿ ಮಾಡಿಲ್ಲ? ಸಹಿ ಮಾಡಿಸಲು ಆಗಿಲ್ಲ ಎಂದರೆ ಯಾರನ್ನು ಮೆಚ್ಚಿಸಲು, ಯಾರದೊ ಮನೆಯಲ್ಲಿ ಕುಳಿತು ವರದಿ ಬರೆದಿರಬಹುದು. ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದ ವ್ಯಕ್ತಿಗೆ ಸರಕಾರಕ್ಕೆ ಸಲ್ಲಿಸುವ ವರದಿಗೆ ಸಹಿ ಮಾಡಿಸಲು ಆಗದಷ್ಟು ಮರೆವು ಇತ್ತೇ” ಎಂದು ವ್ಯಂಗ್ಯವಾಡಿದರು.
ವಿರೋಧ ಪಕ್ಷ ನಾಯಕರ ಕಚೇರಿಯ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರಾದ ಉದಯ್ ಗರುಡಾಚಾರ್, ಎಸ್. ಮುನಿರಾಜು, ಹರೀಶ್ ಪೂಂಜಾ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯದ ಮಾನ್ಯ ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಶ್ರೀ @RAshokaBJP ಅವರ ವಿಧಾನಸೌಧದ ಅಧಿಕೃತ ವಿರೋಧ ಪಕ್ಷ ನಾಯಕರ ಕಛೇರಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ಶ್ರೀ ಉದಯ್ ಗರುಡಾಚಾರ್, ಶ್ರೀ ಎಸ್. ಮುನಿರಾಜು, ಶ್ರೀ ಹರೀಶ್ ಪೂಂಜಾ, ಸೇರಿದಂತೆ ಪಕ್ಷದ ಮುಖಂಡರು ಹಾಗೂ… pic.twitter.com/e6EwaCaHBG— Vijayendra Yediyurappa (@BYVijayendra) November 23, 2023