- ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯ ಇದೆ: ಸಿಎಂ ಸಿದ್ದರಾಮಯ್ಯ ಅಭಯ
- KAS-PSI ಪರೀಕ್ಷೆಯಲ್ಲಿ ಪಾಸಾಗಲು ವೀಣಾ ಕಾಶಪ್ಪನವರ್ ಫೌಂಡೇಶನ್ ನೆರವಾಗಲಿದೆ
ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯ ಇದೆ. ಗ್ರಾಮೀಣ ಮಕ್ಕಳೂ KAS-PSI ಪರೀಕ್ಷೆಯಲ್ಲಿ ಪಾಸಾಗಲು ವೀಣಾ ಕಾಶಪ್ಪನವರ್ ಫೌಂಡೇಶನ್ ನೆರವಾಗಲಿದೆ. ಈಗ 200 ಅಭ್ಯರ್ಥಿಗಳಿಂದ ಆರಂಭವಾಗಿ 1500 ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ವೀಣಾ ಕಾಶಪ್ಪನವರ್ ಫೌಂಡೇಷನ್ ನೆರಳಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆಯ ವೀಣಾ ವಿ ಕಾಶಪ್ಪನವರ್ ಫೌಂಡೇಶನ್ ಹಮ್ಮಿಕೊಂಡಿದ್ದ ಉಚಿತ ಕೆ.ಎ.ಎಸ್ ಮತ್ತು ಪಿ.ಎಸ್.ಐ ಪರೀಕ್ಷೆಯ ತರಬೇತಿ ಕೇಂದ್ರ ಮತ್ತು ಅಕಾಡೆಮಿ ಉದ್ಘಾಟಿಸಿ ಮಾತನಾಡಿದರು.
“ಸಾವಿರಾರು ವಿದ್ಯಾರ್ಥಿಗಳ KAS-IAS ಕನಸನ್ನು, ಅವಕಾಶ ವಂಚಿತ ವಿದ್ಯಾರ್ಥಿಗಳ PSI-IPS ಆಗುವ ಕನಸನ್ನು ನನಸು ಮಾಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸದಲ್ಲಿ ಕಾಶಪ್ಪನವರ್ ದಂಪತಿ ತೊಡಗಿದ್ದಾರೆ. ಇವರಿಗೆ ನಿಮ್ಮ ಆಶೀರ್ವಾದ ಇರಲಿ” ಎಂದರು.
“ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಜಿಲ್ಲೆ ನೆನಪಿಡುವ ಕೆಲಸಗಳನ್ನು ವೀಣಾ ಅವರು ಮಾಡಿದ್ದಾರೆ. ಇವರ ಸಮಾಜಮುಖಿ ಕೆಲಸಗಳು ಈ KAS ಅಕಾಡೆಮಿ ಮೂಲಕ ಇನ್ನಷ್ಟು ವಿಸ್ತಾರವಾಗುತ್ತಿದೆ. ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಈ ಪ್ರತಿಭೆಗೆ ಅವಕಾಶಗಳು ಬೇಕು. ಆ ಅವಕಾಶವನ್ನು ಸೃಷ್ಟಿಸುವ ಕೆಲಸವನ್ನು ವೀಣಾ ಕಾಶಪ್ಪ ದಂಪತಿ ಯಶಸ್ವಿಯಾಗಿ ಮಾಡುತ್ತಿದ್ದಾರೆ” ಮೆಚ್ಚುಗೆ ವ್ಯಕ್ತಪಡಿಸಿದರು.
58 ಸಾವಿರ ಕೋಟಿ ರೂಪಾಯಿಯನ್ನು ಜನರ ಜೇಬಿಗೆ ಹಾಕುತ್ತೇವೆ
“ಬಡವರಿಗೆ ಜಾತಿ-ಧರ್ಮ ಎನ್ನುವುದು ಇಲ್ಲ. ಎಲ್ಲಾ ಜಾತಿ ಧರ್ಮದ ಬಡವರ, ಮಧ್ಯಮವರ್ಗದವರ ಸಂಕಟಗಳೂ ಒಂದೇ ಆಗಿವೆ. ಹೀಗಾಗಿ ಎಲ್ಲಾ ಜಾತಿಯ ಬಡವರು ಮತ್ತು ಮಧ್ಯಮವರ್ಗದವರ ಸಂಕಷ್ಟಕ್ಕೆ ಸ್ಪಂದಿಸಲು ಬಾವು ಗ್ಯಾರಂಟಿ ಯೋಜನೆಗಳ ಮೂಲಕ ಈ ವರ್ಷ 38 ಸಾವಿರ ಕೋಟಿ ರೂಪಾಯಿಯನ್ನು ಕನ್ನಡ ಜನತೆಯ ಜೇಬಿಗೆ ಹಾಕುವ ಕೆಲಸ ಮಾಡಿದ್ದೇವೆ. ಮುಂದಿನ ವರ್ಷ ಕನ್ನಡ ನಾಡಿನ ಜನತೆಯ ಜೇಬಿಗೆ 58 ಸಾವಿರ ಕೋಟಿ ರೂಪಾಯಿಯನ್ನು ಹಾಕುತ್ತೇವೆ. ವಿರೋಧಿಗಳ ಟೀಕೆಗೆ ಡೋಂಟ್ ಕೇರ್” ಎಂದರು.
ಬಂಜಾರ ಶಕ್ತಿಪೀಠದ ಕುಮಾರ ಮಹಾರಾಜರು ಸಾನಿಧ್ಯ ವಹಿಸಿದ್ದರು. ಶಾಸಕ ಎಚ್ ವಾಯ್ ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ, ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ, ಹುನಗುಂದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ್, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಯಲ್ಲಾಲಿಂಗ ಶ್ರೀಮಠದ ಡಾ.ಮುರುಘರಾಜೇಂದ್ರ ಶ್ರೀಗಳು, ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಸೇರಿದಂತೆ ಇತರರು ಇದ್ದರು.