ರಾಜ್ಯ ವಿಧಾನ ಪರಿಷತ್ 7 ಸ್ಥಾನಗಳಿಗೆ 2024ರ ಜೂನ್‌ನಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. 7 ಕ್ಷೇತ್ರಗಳಲ್ಲಿ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ 1,40,423 ಪದವೀಧರರು ನೋಂದಾಯಿಸಿಕೊಂಡಿದ್ದಾರೆ.
ಇನ್ನುಳಿದಂತೆ ಬೆಂಗಳೂರು ಪದವೀಧರರ ಕ್ಷೇತ್ರ 67,787, ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ 65,566, ಶಿಕ್ಷಕರ ಕ್ಷೇತ್ರಗಳ ಪೈಕಿ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 20,465, ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ 16,950, ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ 14,206 ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 10,022 ಶಿಕ್ಷಕರು ಮತದಾನ ಮಾಡಲು ಅರ್ಹರಾಗಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಕರಡು ಸಿದ್ದಪಡಿಸಲು ಸೆಪ್ಟೆಂಬರ್ 30 ರಿಂದ ನವೆಂಬರ್ 6ರವರೆಗೆ ಮತದಾರರ ಅರ್ಜಿಗಳನ್ನು ಸ್ವೀಕರಿಸಿತ್ತು. ನ.6ರವರೆಗೆ ಅರ್ಜಿಗಳನ್ನು ಸಲ್ಲಿಸಿದ ಎಲ್ಲ ಅರ್ಜಿದಾರರು ನಿಗದಿಪಡಿಸಿದ ಸಂಬಂಧಿತ ಪದವೀಧರ / ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮತ್ತು ಹಕ್ಕುಗಳು ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಡಿ.12ರೊಳಗೆ ನಮೂನೆ 18 ಮತ್ತು 19 ರಲ್ಲಿ ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಸಲ್ಲಿಸುವಂತೆ ಕೋರಲಾಗಿದೆ.
ಈ ಸುದ್ದಿ ಓದಿದ್ದೀರಾ? ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ ನಿಧನ
ಡಿ.25 ರಂದು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಡಿ.30 ರಂದು ಅಂತಿಮವಾಗಿ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.
2024ರ ಜೂನ್ ತಿಂಗಳಲ್ಲಿ ಆರು ಮಂದಿಯ ಸದಸ್ಯತ್ವ ಮುಕ್ತಾಯ
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಹೀಗಾಗಿ ಒಟ್ಟು ಏಳು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಈಶಾನ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ.ಚಂದ್ರಶೇಖರ್ ಬಿ. ಪಾಟೀಲ್, ನೈರುತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಎ.ದೇವೇಗೌಡ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ.ವೈ.ಎ ನಾರಾಯಣಸ್ವಾಮಿ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಸ್.ಎಲ್ ಭೋಜೇಗೌಡ, ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಮರಿತಿಬ್ಬೇಗೌಡ ಅವರ ಅವಧಿ 2024ರ ಜೂನ್ ತಿಂಗಳಿಗೆ ಮುಕ್ತಾಯವಾಗಲಿದೆ.
ಈ ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ರಾಮೋಜಿ ಗೌಡ, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ, ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಕೆ.ಕೆ. ಮಂಜುನಾಥ್, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಿ.ಟಿ ಶ್ರೀನಿವಾಸ್, ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಡಾ. ಚಂದ್ರಶೇಖರ್ ಬಿ ಪಾಟೀಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.