ರಾಯಚೂರು ವಿಶ್ವವಿದ್ಯಾಲಯದ ಕಟ್ಟಡಗಳ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಪಟ್ಟಾದಾರರು ಮತ್ತು ಸಾಗುವಳಿದಾರರಿಗೆ ಪರಿಹಾರ ನೀಡಿ ಉದ್ಯೋಗ ಒದಗಿಸುವಂತೆ ಜೆಡಿಎಸ್ ಒತ್ತಾಯಿಸಿದೆ.
ರಾಯಚೂರು ವಿಶ್ವವಿದ್ಯಾಲಯದ ಕಲಪತಿಗಳನ್ನು ಭೇಟಿ ಮಾಡಿದ ಜೆಡಿಎಸ್ ಮುಖಂಡ ನಿಜಾಮುದ್ದೀನ್ ಮತ್ತು ರೈತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಯರಗೇರಾ ಸೀಮಾಂತರ ಸರ್ವೇ ನಂ.347ರಲ್ಲಿದ್ದ 20 ಮಂದಿ ಭೂಮಾಲೀಕರು ಮತ್ತು 11 ಮಂದಿ ರೈತರಿಂದ 250 ಎಕರೆ ಭೂಮಿಯನ್ನು 192-93ರಲ್ಲಿ ಸ್ನಾತಕೋತ್ತರ ಕೇಂದ್ರದ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಂದಿನ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಮುನಿಯಮ್ಮ ಅವರು ಭೂಮಿ ಕಳೆದುಕೊಂಡವರಿಗೆ ಪರಿಹಾರ ಮತ್ತು ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು” ಎಂದು ವಿವರಿಸಿದ್ದಾರೆ.
“ಅದರೆ, ರೈತರಿಗೆ ಯಾವುದೇ ಪರಿಹಾರವಾಗಲೀ, ಉದ್ಯೋಗವಾಗಲಿ ಈವರೆಗೂ ದೊರೆತಿಲ್ಲ. ಕೃಷಿಯನ್ನೇ ನಂಬಿ ಈವನ ಸಾಗಿಸುತ್ತಿದ್ದ ಕುಟುಂಬಗಳು ಈಗ ಬದುಕು ದೂಡಲು ಪರದಾಡುವಂತಾಗಿದೆ. ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ವಿಶ್ವವಿದ್ಯಾಲಯದಲ್ಲಿರುವ ಬೋಧಕೇತರ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಈ ಕುಟುಂಬಗಳಿಗೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸಿವು ವೇಳೆ ಸಂತ್ರಸ್ತ ರೈತ ಪರಶಪ್ಪ, ರಾಮಪ್ಪ, ತಾಯಣ್ಣ, ಹನುಮಂತ, ಬೊಡ್ಡಯ್ಯ, ತಿಮ್ಮಪ್ಪ, ದೇವದಾಸ, ಚನ್ನಕೃಷ್ಣ, ತಿಪ್ಪಯ್ಯ, ರಾಮು, ಭೀಮಕ್ಕ, ಮುನಿಯಪ್ಪ ಸೇರಿ ಅನೇಕರಿದ್ದರು.
ವರದಿ : ಹಫೀಜುಲ್ಲ