ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಬೇಕೆಂದು ಎಐಆರ್ಎಸ್ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ಈ ವೇಳೆ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಅಜೀಜ್ ಜಾಗೀರ್ದಾರ್, ಜಿಲ್ಲಾದ್ಯಂತ ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗ್ತಿದೆ. ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದ ಕಾರಣ, ವಿದ್ಯಾರ್ಥಿಗಳು ಬಸ್ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿರಬಹುದು. ಆದರೆ, ಇಲಾಖೆಯ ನಿರ್ವಹಣೆ ಹಾಗೂ ಅನೇಕ ನ್ಯೂನತೆಗಳಿಂದ ವಿದ್ಯಾರ್ಥಿಗಳು, ಯುವಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ” ಎಂದು ಆಗ್ರಹಿಸಿದರು.
“ಅನೇಕ ಬಸ್ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿರುವ ಕಾರಣ ಕಾಲೇಜಿನ ವಿದ್ಯಾರ್ಥಿಗಳಿಗೆ ಆಸನಗಳು ಹಾಗೂ ಬಸ್ ಸೌಲಭ್ಯ ಸಿಗುವುದಿಲ್ಲ. ಅನೇಕ ಬಾರಿ ವಿದ್ಯಾರ್ಥಿಗಳು ನಿಂತುಕೊಂಡೇ ಪ್ರಯಾಣಿಸಬೇಕು. ಅಲ್ಲದೇ ಅನೇಕ ಬಸ್ ನಿಲ್ದಾಣಗಳಲ್ಲಿ ಚಾಲಕರು ಬಸ್ ನಿಲ್ಲಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ” ಎಂದು ದೂರಿದರು.
ಸಾರಿಗೆ ಇಲಾಖೆಯಿಂದ ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆಗೆ ಮುಕ್ತಿ ನೀಡಬೇಕಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು. ಹಳ್ಳಿಗಳಿಗೂ ಸೂಪರ್ ಬಸ್ಸುಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಜಿ.ಅಮರೇಶ್, ನಿರಂಜನ್ ಕುಮಾರ್, ಲಕ್ಷ್ಮಣ್, ಇನ್ನಿತರರು ಹಾಜರಿದ್ದರು.