ಗುರ್ಮೀತ್ ರಾಮ್ ರಹೀಮ್ 2017ರ ಆಗಸ್ಟ್ 25ರಿಂದ ಜೈಲಿನಲ್ಲಿದ್ದಾನೆ. ಈ ವರ್ಷದಲ್ಲಿ ಇವನು 21 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಿದ್ದಿರುವುದು ಇದು ಮೂರನೆಯ ಸಲ. ಈ ಸರ್ಕಾರಿ ಔದಾರ್ಯದ ಹಿಂದಿರುವುದು ರಾಜಸ್ತಾನದ ವಿಧಾನಸಭಾ ಚುನಾವಣೆ.
ಹಂತಕ ಮತ್ತು ಬಲಾತ್ಕಾರಿ ಬಾಬಾ ಬೇಕೆಂದಾಗಲೆಲ್ಲ ಜೈಲಿನಿಂದ ಹೊರಬಂದು ಮೋಜು ಉಡಾಯಿಸುತ್ತಾನೆ. ಹರಿಯಾಣದ ಮನೋಹರಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಈ ಗಂಭೀರ ಪಾತಕಿಯ ಪಾಲಿಗೆ ಜೈಲಿನ ಬಾಗಿಲು ತೆರೆಯುವ ಕಾನ್‍ಸ್ಟೆಬಲ್ ಆಗಿ ಹೋಗಿದೆ.
ಬೇಸಿಗೆ ಮಳೆಗಾಲ ಚಳಿಗಾಲಗಳಲ್ಲಿ ಹಣವುಳ್ಳ ಜನ ರಜೆ ಹಾಕಿ ಪ್ರವಾಸ ಹೋಗುವಷ್ಟೇ ಸಲೀಸಾಗಿ ಇವನು ಜೈಲಿನಿಂದ ಹೊರ ಬರುತ್ತಾನೆ. ಬೇರೆ ಬೇರೆ ಅವಧಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಈತನ ರಾಜಕೀಯ ಪ್ರಭಾವದ ಫಲಾನುಭವಿಗಳು.
ಸ್ವಘೋಷಿತ ದೇವಮಾನವ ರಾಮ್ ರಹೀಮ, ತನ್ನ 23ನೆಯ ವಯಸ್ಸಿನಲ್ಲಿ ಡೇರಾ ಸಚ್ಚಾ ಸೌದಾ ಎಂಬ ಧಾರ್ಮಿಕ ಪಂಥದ ಮುಖ್ಯಸ್ಥನಾದ. ಹರಿಯಾಣ, ರಾಜಸ್ತಾನ ಹಾಗೂ ಪಂಜಾಬಿನ ರಾಜಕಾರಣದ ಮೇಲೆ ಪ್ರಭಾವ ಬೀರಬಲ್ಲ ಇವನಿಗೆ ಝಡ್ ಶ್ರೇಣಿಯ ಸುರಕ್ಷತೆ ಒದಗಿಸಲಾಗಿದೆ. ಮುಖ್ಯಮಂತ್ರಿಗಳು, ಮಂತ್ರಿಗಳೂ ಇವನಿಗೆ ತಲೆಬಾಗಿ ನಮಿಸುತ್ತಾರೆ.
ನೂರಾರು ವಿದೇಶಿ ವಿಲಾಸಿ ಕಾರುಗಳ ಒಡೆಯನಿವನು. ತನ್ನ ಸೇವೆಗೆಂದು ಸುಮಾರು 400 ಮಂದಿ ಗುಲಾಮರನ್ನು ಇರಿಸಿಕೊಂಡಿದ್ದಾನೆ. ಇವರ ಲೈಂಗಿಕ ಶಕ್ತಿಹರಣ ಮಾಡಿಸಿದ್ದಾನೆ. ಮೂರು ಚಲನಚಿತ್ರಗಳನ್ನು ತಯಾರಿಸಿ, ನಿರ್ದೇಶಿಸಿ ಅವುಗಳಲ್ಲಿ ನಾಯಕನಾಗಿ ನಟಿಸಿಯೂ ಇದ್ದಾನೆ. ತಾನೇ ನಿರ್ಮಿಸಿರುವ ನೂರಾರು ವಿಡಿಯೋಗಳ ರಾಕ್ ಸ್ಟಾರ್ ಈ ಧರ್ಮಗುರು.
56 ವರ್ಷ ವಯಸ್ಸಿನ ಗುರ್ಮೀತ್ ರಾಮ್ ರಹೀಮ್ 2017ರ ಆಗಸ್ಟ್ 25ರಿಂದ ಜೈಲಿನಲ್ಲಿದ್ದಾನೆ. ತನ್ನ ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ನಡೆಸಿದ್ದಕ್ಕಾಗಿ ಸಿಬಿಐ ವಿಶೇಷ ನ್ಯಾಯಾಲಯ ಇವನಿಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ತನ್ನ ಸಂಸ್ಥೆಯ ಮ್ಯಾನೇಜರ್ ರಣಜಿತ್ ಸಿಂಗ್ ಮತ್ತು ಪತ್ರಕರ್ತ ರಾಮಚಂದರ್ ಛತ್ರಪತಿ ಹತ್ಯೆ ಆರೋಪಗಳು ಸಾಬೀತಾಗಿ ಜೀವಾವಧಿ ಶಿಕ್ಷೆಗಳನ್ನು ಇವನು ತೀರಿಸಬೇಕಿದೆ.
ಡೇರಾ ಸಚ್ಚಾ ಸೌದಾದ ಇಬ್ಬರು ಮಹಿಳಾ ಭಕ್ತರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಗುರ್ಮೀತ್ ವಿರುದ್ಧ ರಾಷ್ಟ್ರಪತಿಗೆ ಬರೆದಿದ್ದ ಪತ್ರವನ್ನು ಛತ್ರಪತಿ ತನ್ನ ‘ಪೂರಾ ಸಚ್’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ತನ್ನ ಮನೆಯಂಗಳದಲ್ಲೇ ಗುಂಡು ಹಾರಿಸಿ ಈತನನ್ನು ಹತ್ಯೆ ಮಾಡಲಾಗಿತ್ತು.
2022ರ ಫೆಬ್ರವರಿಯಿಂದ ಇಲ್ಲಿಯ ತನಕ ಚುನಾವಣೆಗಳು ನಡೆದಾಗಲೆಲ್ಲ ಪೆರೋಲ್– ಫರ್ಲೋ ಮೇರೆಗೆ ಐದು ಸಲ ಜೈಲು ವಾಸದಿಂದ ಹೊರಬಿದ್ದಿದ್ದಾನೆ. ಪೆರೋಲ್ ಅವಧಿ ಶಿಕ್ಷೆಯ ಅವಧಿಯಿಂದ ಕಡಿತಗೊಳ್ಳುವುದಿಲ್ಲ. ಕೈದಿಯು ಶಿಕ್ಷೆಯ ಅವಧಿಯೊಂದಿಗೆ ಪೆರೋಲ್ ಅವಧಿಯನ್ನೂ ತೀರಿಸಬೇಕು. ಆದರೆ ಕೈದಿಗೆ ನೀಡಲಾದ ಫರ್ಲೋ ಅವಧಿಯು, ಶಿಕ್ಷೆಯ ಅವಧಿಗೆ ಸೇರ್ಪಡೆಯಾಗುವುದಿಲ್ಲ.
2020ನೆಯ ಇಸವಿಯಲ್ಲಿ ಒಂದು ದಿನದ ಪೆರೋಲ್, 2021ರ ಮೇ ತಿಂಗಳಲ್ಲಿ ಮತ್ತೊಂದು ದಿನದ ಪೆರೋಲ್, 2022ರ ಫೆಬ್ರವರಿಯಲ್ಲಿ ಮೂರು ವಾರಗಳ ಫರ್ಲೋ, 2023ರ ಜುಲೈ ತಿಂಗಳಲ್ಲಿ 30 ದಿನಗಳ ಪೆರೋಲ್, 2022ರ ಜೂನ್ ನಲ್ಲಿ 30 ದಿನಗಳ ಪೆರೋಲ್, 2022ರ ಆಕ್ಟೋಬರ್ ನಲ್ಲಿ 40 ದಿನಗಳ ಪೆರೋಲ್, 2023ರ ಜನವರಿಯಲ್ಲಿ 40 ದಿನಗಳ ಪೆರೋಲ್, 2023ರ ಜುಲೈ ತಿಂಗಳಲ್ಲಿ 30 ದಿನಗಳ ಪೆರೋಲ್ ನೀಡಲಾಗಿದೆ ಇವನಿಗೆ.
ಈ ವರ್ಷದಲ್ಲಿ ಇವನು 21 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಿದ್ದಿರುವುದು ಇದು ಮೂರನೆಯ ಸಲ. ಈ ಸರ್ಕಾರಿ ಔದಾರ್ಯದ ಹಿಂದಿರುವುದು ರಾಜಸ್ತಾನದ ವಿಧಾನಸಭಾ ಚುನಾವಣೆ. ಈ ಮರುಭೂಮಿ ರಾಜ್ಯದ ಗಂಗಾನಗರ ಜಿಲ್ಲೆಯ ಗುರುಸಾರ್ ಮೋದಿಯಾ ಇವನ ಹುಟ್ಟೂರು. ಹರಿಯಾಣದ ಗಡಿಯಲ್ಲಿರುವ ರಾಜಸ್ತಾನ ಸೀಮೆಯ ಗಂಗಾನಗರ, ಚುರು ಹಾಗೂ ಹನುಮಾನ್ ಗಢದಲ್ಲಿ ಸಾಕಷ್ಟು ಅನುಯಾಯಿಗಳು ಈತನಿಗಿದ್ದಾರೆ.
ಅಕಾಲ್ ತಖ್ತ್ ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಈತನಿಗೆ ನೀಡಲಾಗುತ್ತಿರುವ ಪೆರೋಲ್ ಮತ್ತು ಫರ್ಲೋ ರಜೆಗಳನ್ನು ವಿರೋಧಿಸುತ್ತಲೇ ಬಂದಿದೆ. ಒಂದೆಡೆ ಗುರ್ಮೀತ್ ಗೆ ಪುನಃ ಪುನಃ ಪೆರೋಲ್ ನೀಡಲಾಗುತ್ತಿದ್ದು, ಮತ್ತೊಂದೆಡೆ ಮೂವತ್ತು ವರ್ಷಗಳಿಂದ ಜೈಲಿನಲ್ಲಿರುವ ಸಿಖ್ ಸೆರೆಯಾಳುಗಳಿಗೆ ಬಿಡುಗಡೆಯ ದೂರದ ಆಶಾಕಿರಣ ಕೂಡ ಇಲ್ಲವಾಗಿದೆ ಎಂದು ಅಸಮಾಧಾನ ಪ್ರಕಟಿಸಿದೆ.
ಆಷಾಢಭೂತಿ ಮೋದಿ ಸಂಗಾತಿಗಳು ಬಲಾತ್ಕಾರಿಗಳಿಗೆ ಕಳೆದ ಒಂಬತ್ತೂವರೆ ವರ್ಷಗಳಿಂದಲೂ ಕೆಂಪು ನಡೆಮುಡಿಯನ್ನು ಹಾಸುತ್ತಲೇ ಬಂದಿದ್ದಾರೆ. ಬಾಯಲ್ಲಿ ಮಾತ್ರ ಬೇಟಿ ಬಚಾವೋ ಎಂಬ ಮೋಸದ ಮಂತ್ರ. ಆಚರಣೆಯಲ್ಲಿ ಅತ್ಯಾಚಾರಿಗಳನ್ನು ಉಳಿಸುವುದೇ ಷಡ್ಯಂತ್ರ. ವಿಚಾರಣಾಧೀನ ಆರೋಪಿಗಳಿಗೆ ಜಾಮೀನು ನೀಡುವುದು ನ್ಯಾಯಾಲಯ. ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಪೆರೋಲ್ ಮತ್ತು ಫರ್ಲೋ ನೀಡುವ ಅಧಿಕಾರ ಆಯಾ ಜೈಲಿನ ಅಧೀಕ್ಷಕ, ಜೈಲುಗಳ ಮಹಾನಿರ್ದೇಶಕ ಹಾಗೂ ಜಿಲ್ಲಾಧಿಕಾರಿಯದು. ಹೀಗಾಗಿಯೇ ಈ ಅಧಿಕಾರದ ದುರುಪಯೋಗ ಹದ್ದು ಮೀರಿದೆ.
ದೇಶದ ಕ್ರಿಮಿನಲ್ ನ್ಯಾಯವ್ಯವಸ್ಥೆಯ ನಿರ್ಲಜ್ಜ ಅಣಕವಿದು. ಇಂತಹ ಪ್ರಹಸನಗಳ ಸಾಲಿಗೆ ಗುರ್ಮೀತ್ ಪೆರೋಲ್– ಫರ್ಲೋ ಹಗರಣವೂ ಸೇರಿ ಹೋಗಲಿದೆ. ನ್ಯಾಯದೇವತೆಯ ಕೈಯಲ್ಲಿ ತಕ್ಕಡಿಯಿದೆ ನಿಜ. ಆದರೆ ಆಕೆಯ ಕಣ್ಣಿಗೆ ಕಪ್ಪುಬಟ್ಟೆಯನ್ನು ಬಿಗಿಯಲಾಗಿದೆ. ಅನ್ಯಾಯಗಳಿಗೂ ಈಕೆಯ ಕಣ್ಣುಗಳನ್ನು ಕುರುಡು ಮಾಡಿರುವದು ದುರಂತವೇ ಸರಿ.