ಡಿಸೆಂಬರ 9 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗ ಎಸ್.ಕೆ. ಕನಕಟ್ಟೆ ಹೇಳಿದರು.
ಗುರುವಾರ ಬೀದರನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಛೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಡಿಸೆಂಬರ್ 9 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಮಾಹಿತಿ ನೀಡಿದರು.
“ಈ ವರ್ಷದ ಕೊನೆಯ ಲೋಕ ಅದಾಲತ್ ಆಗಿರುವದರಿಂದ ಕಳೆದ ಲೋಕ ಅದಾಲತಗಿಂತ ಈ ಸಲ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿಯಿದೆ. ಪ್ರಸ್ತುತ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ ಜೀವನಾಂಶ, ಚೆಕ್ ಬೌನ್ಸ್, ವಿದ್ಯುತ್ ಪ್ರಕರಣ, ಕಂದಾಯ ಅಪರಾಧಿಕ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವಂತಹ ಪ್ರಕರಣ, ಕಾರ್ಮಿಕರ ಪ್ರಕರಣ, ಬ್ಯಾಂಕ್ ಪ್ರಕರಣ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆ” ಎಂದು ತಿಳಿಸಿದರು.
“ಈ ಹಿಂದೆ ಸೆಪ್ಟೆಂಬರ್ 9 ರಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಜಿಲ್ಲೆಯಲ್ಲಿ ಒಟ್ಟು 21,791 ಪ್ರಕರಣಗಳನ್ನು ಇತ್ಯರ್ಥಪಡಿಸಿ, 23.18 ಕೋಟಿ ರೂ.ಗಳನ್ನು ವಸೂಲಾತಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಬಾಕಿ ಪ್ರಕರಣಗಳು, ವ್ಯಾಜಪೂರ್ವ ಪ್ರಕರಣ, ಬ್ಯಾಂಕ್ ವಸೂಲಿ ಪ್ರಕರಣ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳ ನೀರಿನ ತೆರಿಗೆ, ಬಿಎಸ್‌ಎನ್‌ಎಲ್ ಹಾಗೂ ಜೆಸ್ಕಾಂ ಬಾಕಿ ಬಿಲ್ ಗಳ ಪ್ರಕರಣಗಳು ಸೇರಿವೆ” ಎಂದರು.
“2023ರ ಜನವರಿ 1ರ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 27,424 ಪ್ರಕರಣಗಳು ಬಾಕಿಯಿದ್ದು. ಇವುಗಳಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ರಾಜಿ ಮಾಡುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೆ, ಕೆಎಸ್‌ಆರ್‌ಟಿಸಿ, ನಗರಸಭೆ, ಜಿಲ್ಲಾ ಪಂಚಾಯತ, ಪೊಲೀಸ್, ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ರಾಷ್ಟ್ರೀಯ ಲೋಕ ಅದಾಲತನಲ್ಲಿ ಪ್ರಕರಣ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯ ಶುಲ್ಕ ವಾಪಸ್ ಸಿಗಲಿದೆ. ಎರಡು ಪಕ್ಷದವರು ದ್ವೇಷ ಮರೆತು ಉತ್ತಮ ಬಾಂಧವ್ಯ ಹೊಂದಬಹುದು. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಗಡಿ ಭಾಗದ ಕಮಲನಗರ ತಾಲೂಕು ಕೆಂದ್ರದಲ್ಲೇ ಇಲ್ಲ ʼಸರ್ಕಾರಿ ಪ್ರೌಢ ಶಾಲೆʼ
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಜಿ. ಸುರೇಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳಾದ, ಜಗದೀಶ್ವರ ದೊರೆ, ಆಕಾಶ ಸಜ್ಜನ, ರಾಹುಲ ರೋಷನ್, ಜೀವನ್, ಯೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.