ಡ್ರಗ್ಸ್ ಖರೀದಿಸುವ ಸಲುವಾಗಿ ಒಂದು ತಿಂಗಳ ಮಗು ಸೇರಿ ಸ್ವಂತ ಇಬ್ಬರು ಮಕ್ಕಳನ್ನೇ 74 ಸಾವಿರ ರೂ.ಗಳಿಗೆ ಮಾರಾಟ ಮಾಡಿದ ಘಟನೆ ಮುಂಬೈ ನಗರದ ಅಂಧೇರಿಯಲ್ಲಿ ಇಂದು (ನ.24) ನಡೆದಿದೆ.
ಘಟನೆ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮಧ್ಯವರ್ತಿಯೊಬ್ಬ ಕೂಡ ಸೇರಿದ್ದಾನೆ. ಒಂದು ತಿಂಗಳ ಮಗುವನ್ನು ರಕ್ಷಿಸಲಾಗಿದ್ದು, ಎರಡು ವರ್ಷದ ಇನ್ನೊಂದು ಮಗುವಿನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
“ದಂಪತಿಗಳು ಮಾದಕ ವ್ಯಸನಿಗಳಾಗಿದ್ದು ಸ್ವಂತ ಮಕ್ಕಳನ್ನೇ ಅಂಧೇರಿಯಲ್ಲಿ ಮಾರಾಟ ಮಾಡಿದ್ದಾರೆ. ದಂಪತಿಯ ಮನೆಯವರಿಗೆ ವಿಷಯ ತಿಳಿದ ನಂತರ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿ ಮೂವರನ್ನು ಬಂಧಿಸಲಾಗಿದೆ. 2 ವರ್ಷದ ಗಂಡು ಮಗುವನ್ನು 60 ಸಾವಿರಕ್ಕೆ ಮಾರಾಟ ಮಾಡಿದರೆ. ಒಂದು ತಿಂಗಳ ಹೆಣ್ಣು ಮಗುವನ್ನು 14 ಸಾವಿರ ರೂ. ಗಳಿಗೆ ದಂಪತಿ ಮಾರಾಟ ಮಾಡಿದ್ದಾರೆ” ಎಂದು ಮುಂಬೈ ಅಪರಾಧ ವಿಭಾಗದ ಅಧಿಕಾರಿ ದಯಾ ನಾಯಕ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಚುನಾವಣೆ | ತ್ರಿಕೋನ ಸ್ಪರ್ಧೆಯ ನಡುವೆ ಗದ್ದುಗೆಗಾಗಿ ಕಾಂಗ್ರೆಸ್, ಬಿಆರ್‌ಎಸ್ ಜಿದ್ದಾಜಿದ್ದಿ
“ದಂಪತಿ ಮಾದಕ ವ್ಯಸನಕ್ಕೆ ತೀರ ದಾಸರಾಗಿದ್ದರು. ಅದೇ ಸಮಯದಲ್ಲಿ ಆರೋಪಿ ರಾಥೋಡ್ ದಂಪತಿಯ ಸಂಪರ್ಕಕ್ಕೆ ಬಂದಿದ್ದಾನೆ. ದಂಪತಿ ತಮ್ಮ ಮಕ್ಕಳನ್ನು 74,000 ರೂ.ಗೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಮಕ್ಕಳನ್ನು ಮಾರಾಟ ಮಾಡಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ದಂಪತಿಗೆ ಇತ್ತೀಚೆಗಷ್ಟೇ ಹೆಣ್ಣು ಮಗು ಜನಿಸಿತ್ತು” ಎಂದು ದಯಾ ನಾಯಕ್ ಹೇಳಿದರು.
ಘಟನೆ ಬೆಳಕಿಗೆ ಬಂದ ನಂತರ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.