ಮಕ್ಕಳ ಸೌಲಭ್ಯದ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮಲ್ಲಿ ದಾಖಲಾದ ಮಕ್ಕಳ ಬಗ್ಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಗರದ ನ್ಯೂ ಘಾಟಗೆ ಲೇಔಟ್ ಬಡಾವಣೆಯಲ್ಲಿರುವ ಅನಾಥ ಮಕ್ಕಳ ತಂಗುದಾಣ ‘ಇಂಟಿಗ್ರೇಟೆಡ್ ಡೆವಲಪ್‍ಮೆಂಟ್ ಆರ್ಗನೈಜೇಷನ್’ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಎಚ್‌ಆರ್‌ಸಿ) ರಿಜಿಸ್ಟ್ರಾರ್ ಗೋಮತಿ ಮನೋಜಾ ಹಾಗೂ ತಂಡದವರು ನ.22 ರಂದು ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಕಡತಗಳನ್ನು ಪರಿಶೀಲಿಸಿದಾಗ ಮಕ್ಕಳು ದಾಖಲಾದ ದಿನಾಂಕಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಎಲ್ಲಾ ಮಕ್ಕಳನ್ನು ಎರಡು-ಮೂರು ದಿನಾಂಕಗಳಲ್ಲಿ ಸೇರಿಕೆ ಮಾಡಿಕೊಂಡು ಮಕ್ಕಳ ಸೌಲಭ್ಯದ ಹಣವನ್ನು ವಂಚಿಸಲು ನಕಲಿ ದಾಖಲಾತಿ ಸೃಷ್ಟಿಸಿರುವುದು ಕಂಡು ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನಕುಮಾರ್ ಅವರು ನೀಡಿದ ದೂರಿನ ಅನ್ವಯ ಸಂಸ್ಥೆ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಅನಾಥ ಮಕ್ಕಳ ತಂಗುದಾಣಲ್ಲಿದ್ದ11 ಹೆಣ್ಣು ಮಕ್ಕಳನ್ನು ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಸ್ಥಳಾಂತಿಸಲಾಗಿದೆ.