ಸಕ್ಷಮ ಪ್ರಾಧಿಕಾರ ಅನುಮತಿಯಿಲ್ಲದೇ, ಅಡ್ವೋಕೆಟ್ ಜನರಲ್ ಅಭಿಪ್ರಾಯವನ್ನೂ ಪಡೆಯದೇ, ಸ್ಪೀಕರ್ ಅನುಮತಿಯೂ ಇಲ್ಲದೆ ಹಿಂದಿನ ಬಿಜೆಪಿನ ಸರ್ಕಾರ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿತ್ತು. ಅದನ್ನು ಈಗ ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಅದರಲ್ಲೇನು ತಪ್ಪಿಲ್ಲ ಎಂದು ಸರ್ಕಾರದ ತೀರ್ಮಾನವನ್ನು ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸುವ ಮುನ್ನ ಸ್ಥಳೀಯವಾಗಿ ತನಿಖೆ ನಡೆಸುವ ಕುರಿತು ಪರಾಮರ್ಶಿಸಬೇಕು. ಅದರೆ, ಅದನ್ನು ಮಾಡೆ ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ಡಿ.ಕೆ.ಶಿವಕುಮಾರ್ ವಿರುದ್ದ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಲಾಗಿತ್ತು. ಜಾರಿ ನಿರ್ದೇಶನಾಲಯ ಸಹ ಆಗ ತನಿಖಾ ಸಂದರ್ಭದಲ್ಲಿ ದೊರೆತಿದ್ದ ಮಾಹಿತಿಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದೆಯೇ ಹೊರತು ಸಿಬಿಐ ತನಿಖೆಗೆ ವಹಿಸಲು ಉಲ್ಲೇಖಿಸಿರಲಿಲ್ಲ” ಎಂದು ವಿವರಿಸಿದ್ದಾರೆ.
“ನಿಯಮಗಳನ್ನುಅನುಸರಿಸದೇ ರಾಜಕೀಯ ದುರುದ್ದೇಶದಿಂದ ಮಾಡಿರುವ ಶಿಫಾರಸ್ಸು ಹಿಂಪಡೆಯಲು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ವರದಿ : ಹಫೀಜುಲ್ಲ