ಈ ದಿನ ಸಂಪಾದಕೀಯ | ಅಂಗಾಂಗ ದಾನವೂ ಪುರುಷ ಪಕ್ಷಪಾತಿ- ಹೆಣ್ಣು ಜೀವಗಳು ಪುರುಷರಿಗೆ ಪ್ರಾಣದಾಯಿಗಳು

Date:

Advertisements
ಅಂಗಾಂಗ ದಾನ ಮಾಡುವ ಪ್ರತಿ ಐವರು ದಾನಿಗಳ ಪೈಕಿ ನಾಲ್ವರು ಮಹಿಳೆಯರು. ಈ ಅಂಗಾಂಗಗಳನ್ನು ದಾನವಾಗಿ ಪಡೆಯುವ ಐವರ ಪೈಕಿ ನಾಲ್ವರು ಪುರುಷರು!

 

ಭಾರತದ ಖಾಸಗಿ ಮತ್ತು ಸಾರ್ವತ್ರಿಕ ಬದುಕನ್ನು ಬಿಗಿಯಾಗಿ ಹೆಣೆದು ನೊಣೆಯುತ್ತಿದೆ ಗಂಡಾಳಿಕೆ. ಕಡೆಗೆ ಅಂಗಾಂಗದಾನವನ್ನೂ ಬಿಟ್ಟಿಲ್ಲ ಈ ಲಿಂಗ ಅಸಮಾನತೆಯ ಅನಿಷ್ಟ. ಮಾನವ ಅಂಗಾಂಗಗಳನ್ನು ಕಸಿ ಮಾಡುವ ಸಂಸ್ಥೆಯ (ಇಂಡಿಯನ್‌ ಸೊಸೈಟಿ ಆಫ್‌ ಆರ್ಗನ್‌ ಟ್ರಾನ್ಸ್‌ಪ್ಲಾಂಟ್) ಇತ್ತೀಚಿನ ವರದಿ ಈ ಅನ್ಯಾಯವನ್ನು ಚೀರಿ ಹೇಳುತ್ತಿದೆ.

ಅಂಗಾಂಗ ದಾನ ಮಾಡುವ ಪ್ರತಿ ಐವರು ದಾನಿಗಳ ಪೈಕಿ ನಾಲ್ವರು ಮಹಿಳೆಯರು. ಈ ಅಂಗಾಂಗಗಳನ್ನು ದಾನವಾಗಿ ಪಡೆಯುವ ಐವರ ಪೈಕಿ ನಾಲ್ವರು ಪುರುಷರು!

ಪುರುಷನ ಪ್ರಾಣಬದುಕು ಹೆಣ್ಣಿನ ಪ್ರಾಣ ಮತ್ತು ಬದುಕಿಗಿಂತ ಹೆಚ್ಚು ಮುಖ್ಯ ಎಂಬ ತರತಮ ನಮ್ಮ ಸಾಮಾಜಿಕ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆರೆತು ಹೋಗಿ ಬೇರು ಬಿಟ್ಟಿದೆ. ಹೆಣ್ಣು ತ್ಯಾಗಮಯಿ ಎಂದು ಆಕೆಯನ್ನು ವೈಭವೀಕರಿಸುವ ಕುತಂತ್ರದಲ್ಲಿ ಅಡಗಿರುವುದೂ ಗಂಡಿನ ಸ್ವಾರ್ಥವೇ ಆಗಿದೆ. ಪಿತೃಪ್ರಧಾನ ಸಂಸ್ಕೃತಿಯ ಅಪ್ಪಟ ಪ್ರತಿಬಿಂಬ.

Advertisements

ಅಂಗಾಂಗಗಳನ್ನು ದಾನವಾಗಿ ಪಡೆಯುವ ಸಂದರ್ಭಗಳಲ್ಲಿ ಕುಟುಂಬಸ್ಥರು ಮತ್ತು ನಿಕಟ ಸಂಬಂಧಿಗಳ ಅಂಗಗಳನ್ನೇ ಪಡೆಯಲು ಅನುಮತಿಸಲಾಗುತ್ತದೆ. ರಕ್ತ ಸಂಬಂಧಿಗಳ ಅಂಗಗಳೇ ರೋಗಿಯ ದೇಹಕ್ಕೆ ಬೇಗ ಹೊಂದಿಕೊಳ್ಳುತ್ತವೆ ಎಂಬುದು ಒಂದು ಕಾರಣವಾದರೆ ಹೊರಗಿಂದ ಪಡೆಯುವ ದಾನಕ್ಕೆ ದೊಡ್ಡ ಮೊತ್ತದ ಹಣವನ್ನು ತೆರಬೇಕು. ಹಾಗೂ ಅದು ಸಕಾಲಕ್ಕೆ ಸಿಗದೆಯೂ ಇರಬಹುದು. ಇಂತಹ ಸನ್ನಿವೇಶಗಳಲ್ಲಿ ಕುಟುಂಬದ ಮಹಿಳೆಯರ ಅಂಗಗಳನ್ನು ಪಡೆಯಲು ಮೊದಲ ಆದ್ಯತೆ.

ಪುರುಷ ರೋಗಿಯ ತಾಯಿ, ಪತ್ನಿ, ಸೋದರಿ, ಸೊಸೆ, ಮಗಳು ಹೀಗೆ ಹೆಣ್ಣುಮಕ್ಕಳ ಅಂಗಗಳನ್ನು ‘ಕಿತ್ತುಕೊಳ್ಳಲಾಗುತ್ತದೆ’. ಹೆಣ್ಣುಮಕ್ಕಳು ತಮ್ಮ ಪತಿ, ಮಗ, ಮಾವನ ಜೀವ ಉಳಿಸಿಕೊಳ್ಳಲು ತಮ್ಮ ಪ್ರಾಣಗಳನ್ನೂ ಪಣವಾಗಿಡುವ ಭಾವುಕ ವಾತಾವರಣವನ್ನು ಶತಮಾನಗಳಿಂದ ಪ್ರಜ್ಞಾಪೂರ್ವಕವಾಗಿ ನಿರ್ಮಾಣ ಮಾಡಿದೆ ಗಂಡಾಳಿಕೆ. ಖುದ್ದು ತಾನು ಅಂಗವೈಕಲ್ಯಕ್ಕೆ ಒಳಗಾದರೂ, ತನ್ನ ಜೀವಕ್ಕೇ ಸಂಚಕಾರ ಬಂದರೂ ಅಡ್ಡಿಯಿಲ್ಲ, ‘ಮನೆ ಯಜಮಾನ’ನ ಜೀವ ಉಳಿಸಿಕೊಳ್ಳುವುದು ಮುಖ್ಯ ಎಂಬುದೇ ಸಹಜ ಮತ್ತು ಸ್ವಾಭಾವಿಕ ಭಾವನೆ ಎಂಬ ಭಾವುಕ ಭ್ರಮೆಯನ್ನು ಆಕೆಯಲ್ಲಿ ಬಿತ್ತಿ ಬೆಳೆಸಲಾಗಿದೆ. ಪುರುಷನೆಂದರೆ ದುಡಿದು ಹಣಗಳಿಸಿ ಕುಟುಂಬವನ್ನು ಸಾಕಿ ಸಲಹುವವನು. ಹೀಗಾಗಿ ಅಂಗ ದಾನ ಪಡೆಯುವುದು ಆತನ ಜನ್ಮಸಿದ್ಧ ಹಕ್ಕು ಎಂಬ ಪುರುಷಾಂಕಾರವೇ ಮಹಿಳಾ ದಾನಿಗಳ ಹೆಚ್ಚಳಕ್ಕೆ ಕಾರಣ ಎಂದರೆ ತಪ್ಪಾಗದು.

ಕುಟುಂಬದ ಪುರುಷ ಸದಸ್ಯರಿಗೆ ಅಂಗಾಂಗ ಅಗತ್ಯವಿದ್ದಾಗ ಅದನ್ನು ದಾನ ಮಾಡುವಂತೆ ಮಹಿಳೆಯರ ಮೇಲೆ ಪ್ರತ್ಯಕ್ಷ ಪರೋಕ್ಷ ಒತ್ತಡ ಹೇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಈ ಒತ್ತಡ ತಿರುವುಮುರುವಾಗುವುದು ಅತಿ ವಿರಳ. ಮಹಿಳೆಯರಿಗೆ ಅಗತ್ಯವಿದ್ದಾಗ ಅದನ್ನು ನೀಡುವಂತೆ ಪುರುಷರ ಮೇಲೆ ಒತ್ತಡ ಹೇರುವುದಿಲ್ಲ. ಇದರ ಸಾಧಕಬಾಧಕ ಸ್ಪಷ್ಟವಾಗಿದೆ. ಬಹುಸಂಖ್ಯೆಯ ಪುರುಷರು ದಾನ ಪಡೆದ ಮಹಿಳೆಯರ ಅಂಗಗಳೊಂದಿಗೆ ಬದುಕುಳಿಯುತ್ತಾರೆ. ಅಷ್ಟೇ ಸಂಖ್ಯೆಯ ಹೆಣ್ಣುಮಕ್ಕಳು ಪುರುಷರಿಂದ ಅಂಗಗಳು ದೊರೆಯದೆ ಸಾಯಬಹುದು ಅಥವಾ ತೀವ್ರ ಅಂಗವೈಕಲ್ಯದ ಜೊತೆಗೆ ಬದುಕಿ ದಿನ ನೂಕಬೇಕಾಗಬಹುದು.

ಮಧುಮೇಹದಿಂದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾದ ಪುರುಷರಿಗೆ ಅವರವರ ಪತ್ನಿಯರೇ ಕಿಡ್ನಿ ದಾನ ಮಾಡಿದ ಉದಾಹರಣೆಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆ. ಆದರೆ ಈ ದಂಪತಿಗಳಿಗೆ ಗಂಡು ಮಕ್ಕಳಿದ್ದರೂ ಅವರಿಂದ ಅಂಗದಾನ ಪಡೆಯುವವರ ಸಂಖ್ಯೆ ಬಹಳ ವಿರಳ. ಮಗನಾದರೇನಂತೆ ಅವನೂ ಪುರುಷನೇ. ಆ ಒಂದು ಕಾರಣಕ್ಕಾಗಿ ಅವನ ಜೀವ ಅಮೂಲ್ಯವಾದದ್ದು. ದಾನ ಮಾಡುವ ಅಮ್ಮನ ಜೀವಕ್ಕಿಂತ ಮಗನ ಜೀವ ಮಹತ್ವದ್ದು ಎಂಬ ಭಾವನೆ. ಮನೆ ಮಗ ಚೆನ್ನಾಗಿ ಬಾಳಿ ಬದುಕಲಿ ಎಂಬುದು ಅಮ್ಮಂದಿರ ಕರುಳಿನ ಕೂಗೂ ಆಗಿರುತ್ತದೆ.

ಪುರುಷ ಮನೆ ಯಜಮಾನ, ದುಡಿದು ಮನೆ ಮಂದಿಯ ಹಸಿವು ನೀಗಿಸುವವ ಎಂಬ ವಾದವೇ ಅತ್ಯಂತ ಕ್ರೂರ. ಇದರ ಅರ್ಥವೇನು? ದುಡಿಯುವ ಸಾಮರ್ಥ್ಯ ಇರುವವನಿಗೆ ಮಾತ್ರ ಬದುಕುವ ಹಕ್ಕು ಇದೆ ಎಂದು ಅರ್ಥವೇ? ಅಂಗಾಂಗ ದಾನ ಅಸಮತೋಲನಕ್ಕೆ ಆರ್ಥಿಕ ಕಾರಣಗಳನ್ನು ಸಾಬೀತುಪಡಿಸಲು ಯಾವುದೇ ಮಾನದಂಡಗಳಿಲ್ಲ.

ಹಣಗಳಿಕೆಯ ಸಾಮರ್ಥ್ಯವೇ ಅಂಗಾಂಗ ದಾನದ ವಿಚಾರದಲ್ಲಿ ಪ್ರಮುಖ ಅಂಶ ಎನ್ನುವುದು ಸರಿಯಲ್ಲ. ಮನೆವಾರ್ತೆ ನೋಡಿಕೊಳ್ಳುವ ಮಹಿಳೆಯ ದುಡಿಮೆಗೆ ಬೆಲೆಯಿಲ್ಲ, ಸಂಬಳದ ಕನಸೂ ಕಾಣುವಂತಿಲ್ಲ. ಆದರೂ ಆಕೆ ತನ್ನ ಕುಟುಂಬಕ್ಕಾಗಿ ಹಗಲಿರುಳು ದುಡಿಯಬೇಕು, ತನ್ನ ಆರೋಗ್ಯ, ಅಂಗಾಂಗಗಳನ್ನು ದಾನ ಮಾಡಬೇಕು ಎಂಬುದು ಗಂಡಾಳಿಕೆ ಆಲೋಚನಾ ಮೂಲದ ಕುಟುಂಬದ ಬೇಡಿಕೆ.

ಅಂಗಾಂಗ ದಾನದ ವಿಷಯದಲ್ಲಿ ಪುರುಷರ ಅಗತ್ಯ ಅನುಕೂಲಗಳೇ ಪರಮ. ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತ ಬಂದಿವೆ. ಮನೆಯಲ್ಲಿ ದುಡಿಯುವ ಮಹಿಳೆ ಮಾತ್ರವೇ ಅಲ್ಲ, ಹೊರಗೆ ಮತ್ತು ಒಳಗೆ ಎರಡೂ ಕಡೆ ದುಡಿಯುವ ಮಹಿಳೆಯರೂ ತಮ್ಮ ಕುಟುಂಬಗಳ ಪುರುಷ ಸದಸ್ಯರಿಗೆ ಅಂಗದಾನ ಮಾಡುತ್ತಿದ್ದಾರೆ. ಇಲ್ಲಿ ಆಕೆ ಕುಟುಂಬದ ಆರ್ಥಿಕ ಶಕ್ತಿ, ದುಡಿದು ಕುಟುಂಬವನ್ನು ಸಾಕುತ್ತಿದ್ದಾಳೆ. ಆದರೂ ಗಂಡಸಿಗೆ ಅನ್ವಯಿಸಲಾಗುವ ಈ ಮಹತ್ವವನ್ನು ಹೆಣ್ಣಿಗೆ ತಿರಸ್ಕರಿಸಲಾಗಿದೆ.

ಮಹಿಳೆಯರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇಂತಹ ಒತ್ತಡವನ್ನು ಅನುಭವಿಸಲು ನಮ್ಮ ಸಮಾಜ ಇನ್ನೂ ಪಿತೃಪ್ರಧಾನ ಸ್ವಭಾವದಿಂದ ಹೊರಬರದಿರುವುದೇ ಮುಖ್ಯ ಕಾರಣ. ಗಂಡಾಳಿಕೆಯು ಶತಮಾನಗಳಿಂದ ಹೆಣ್ಣುಮಕ್ಕಳ ಮಿದುಳನ್ನು ತನ್ನ ಪರವಾಗಿ ತಿದ್ದಿ ತೊಳೆದಿದೆ. ಹೀಗಾಗಿ ಆಕೆಯೂ ಕಟ್ಟುಪಾಡುಗಳ ಸೆರೆಯಾಳು. ವಿಶ್ವಸಂಸ್ಥೆಯ ಲಿಂಗ ಅಸಮಾನತೆ ಸೂಚ್ಯಂಕದ ಪ್ರಕಾರ, 191 ದೇಶಗಳಲ್ಲಿ ಭಾರತದ ಸ್ಥಾನ ಬಹಳ ಕೆಳಗಿನದು (122).

ಎಲ್ಲ ದೇಶಗಳಲ್ಲೂ ಅಂಗಾಂಗ ದಾನದ ಕ್ರಿಯೆ ಪುರುಷ ಪಕ್ಷಪಾತಿ ಎಂಬುದು ನಿಜ. ಆದರೆ ಭಾರತದಲ್ಲಿ ಈ ಪಕ್ಷಪಾತದ ಪ್ರಮಾಣ ಅತಿ ಹೆಚ್ಚು. ಮಹಿಳೆಯರು ಧಾರಣ ಶಕ್ತಿ ಉಳ್ಳವರೂ, ಸಹಜೀವಿಗಳ ಬಗ್ಗೆ ಸ್ವಭಾವತಃ ಪುರುಷರಿಗಿಂತ ಹೆಚ್ಚು ದಯೆ ಕರುಣೆ, ಅನುಕಂಪ ಇರುವವರು. ಪರಿಣಾಮವಾಗಿ ಅಂಗಾಂಗ ದಾನದ ಲಿಂಗಾನುಪಾತ ಅತ್ಯಂತ ಅಸಮಾನ.

ಸಂತಾನಹರಣ ಶಸ್ತ್ರಚಿಕಿತ್ಸೆಯ ಉದಾಹರಣೆ ತೆಗೆದುಕೊಳ್ಳಿ. ಇಲ್ಲಿಯೂ ಮಹಿಳೆಯರನ್ನೇ ಆಪರೇಷನ್‌ ಥಿಯೇಟರಿಗೆ ನೂಕಲಾಗುತ್ತಿದೆ. ವ್ಯಾಸೆಕ್ಟಮಿ ಮಾಡಿಸಿಕೊಳ್ಳಲು ಪುರುಷರು ತಯಾರಿಲ್ಲ. ಮಕ್ಕಳಾಗಿಲ್ಲ ಎಂದರೆ ಬಂಜೆ ಎಂದು ಜರೆಯುವುದು ಹೆಣ್ಣನ್ನು ಮಾತ್ರ. ಬಂಜೆ ಎಂದು ಗಂಡನ್ನು ಹೀಯಾಳಿಸಿರುವುದನ್ನು ಕಂಡಿದ್ದೀರಾ?. ಇತ್ತೀಚಿನ ಒಂದೆರಡು ದಶಕಗಳ ಹಿಂದಿನ ತನಕವೂ ಪತಿಪತ್ನಿ ನಡುವೆ ಎಂಟು ಹತ್ತು ವರ್ಷಗಳ ಅಂತರ ಇರಬೇಕು ಎಂದು ನಮ್ಮ ಹಿರಿಯರು ಹೇಳುತ್ತಿದ್ದುದರ ಹಿಂದೆ ಇದ್ದದ್ದೂ ಇದೇ ಪಿತೃಪ್ರಧಾನ ಧೋರಣೆ. ಬದುಕಿನ ಇಳಿಸಂಜೆಯಲ್ಲಿ ಪತಿಯ ಆರೈಕೆ ಮಾಡಲು ಪತ್ನಿ ಚಿಕ್ಕ ವಯಸ್ಸಿನವಳಾಗಿರಬೇಕು ಎಂಬ ಸ್ವಾರ್ಥ. ಮಕ್ಕಳನ್ನು ಪಡೆಯುವ ವಿಚಾರದಲ್ಲೂ ಹಡೆಯುವ ಹೆಣ್ಣಿಗೆ ಆಯ್ಕೆಯ ಸ್ವಾತಂತ್ರ್ಯ ಎಲ್ಲಿದೆ? ಬೇಡದ ಭ್ರೂಣವನ್ನೂ ತೆಗೆಯುವ ಹಕ್ಕು ತಾಯಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದ ಅನ್ಯಾಯ ನಮ್ಮ ಕಣ್ಣೆದುರಿಗಿದೆ. ಪಿತೃಪ್ರಧಾನ ವ್ಯವಸ್ಥೆಯ ಕೂದಲೂ ಕೊಂಕುತ್ತಿಲ್ಲ. ಸಂಘಟಿತವಾಗಿ ಸಿಡಿದೇಳದಿದ್ದರೆ ಹೆಣ್ಣು ಜೀವಗಳ ಮೂಕಯಾತನೆಗೆ ಕೊನೆಯಿಲ್ಲ ಎಂಬುದು ಕಟು ಸತ್ಯ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X