ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿದ ಕಲ್ಲಿದ್ದಲನ್ನು ಅಕ್ರಮವಾಗಿ ಸಾಗಾಟ ಮಾಡಿದ್ದ ಪ್ರಕರಣದಲ್ಲಿ ರಾಯಚೂರಿನ ಯರಮರಸ್ ರೈಲೈ ನಿಲ್ದಾಣದ ಸ್ಟೇಷನ್ ಮಾಸ್ಟರ್ ಮತ್ತು ಗುತ್ತಿಗೆದಾರ ಶ್ರೀನಿವಾಸುಲು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಲ್ಲಿದ್ದಲು ಕಳ್ಳತನವಾಗಿರುವ ಬಗ್ಗೆ ಯರಮರಸ್ ವಿದ್ಯುತ್ ಉತ್ಪಾದನಾ ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಂದ್ರ ಅವರು ರಾಯಚೂರು ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಕುರಿತು ಕೆಪಿಟಿಸಿಎಲ್ ತನಿಖಾ ಸಮಿತಿ ತನಿಖೆ ನಡೆಸಿದ್ದು, ಕಳ್ಳತನ ಬಯಲಿಗೆ ಬಂದಿದೆ.
ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಸರಬರಾಜು ಮಾಡಬೇಕಿದ್ದ ಕಲ್ಲಿದ್ದಲನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಅನಧಿಕೃತ ಜಾಗಕ್ಕೆ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಕ್ರಮದಲ್ಲಿ ಸ್ಟೇಷನ್ ಮಾಸ್ಟರ್ ಮತ್ತು ಗುತ್ತಿಗೆದಾರರ ಕೈವಾಡ ಇರುವುದು ಕಂಡುಬಂದಿದ್ದು, ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
ಶ್ರೀನಿವಾಸುಲು ಅವರು ರಾಘವೇಂದ್ರ ಎಂಟರ್ ಪ್ರೈಸಸ್ ಹೆಸರಿನಲ್ಲಿ ರೈಲ್ವೆ ವ್ಯಾಗನ್ ಸ್ಬಚ್ಛಗೊಳಿಸುವ ಗುತ್ತಿಗೆ ಪಡೆದಿದ್ದರು. ಅವರು ಕಳೆದ ವಾರ (ನವೆಂಬರ್ 19, 20) ಐದು ಲಕ್ಷ ಮೌಲ್ಯದ 120 ಮೆಟ್ರಿಕ್ ಟನ್ ಕಚ್ಚಾ ಕಲ್ಲಿದ್ದಲು ಕಳ್ಳತನ ಮಾಡಿ, ಯರಮರಸ್ ರೈಲು ನಿಲ್ದಾಣದ ಹೊರ ಭಾಗದಲ್ಲಿ ಶೇಖರಿಸಿದ್ದರು ಎಂದು ಆರೋಪಿಸಲಾಗಿದೆ.
ವ್ಯಾಗನ್‌ನಲ್ಲಿ ಬರುವ ಕಲ್ಲಿದ್ದಲನ್ನು ವಿದ್ಯುತ್ ಘಟಕಗಳ ಪ್ರಾಂಗಣದಲ್ಲಿ ಸಂಪೂರ್ಣವಾಗಿ ಸುರಿಯಬೇಕು. ವ್ಯಾಗನ್ ಖಾಲಿಯಾದ ಬಳಿಕ ರೈಲು ಹಿಂದಿರುಗಲು ಹಸಿರು ನಿಶಾನೆ ನೀಡಬೇಕು. ಆದರೆ, ವ್ಯಾಗನ್‌ಗಳಲ್ಲಿ ದೊಡ್ಡ ಪ್ರಮಾಣದ ಕಲ್ಲಿದ್ದಲನ್ನು ಉಳಿಸಿಕೊಂಡು, ರೈಲನ್ನು ವಾಪಸ್ ಕಳುಹಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.