ಜಯಪ್ರಕಾಶ್ ಹೆಗ್ಡೆ ಅವರನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಶುಕ್ರವಾರ ರಾಜ್ಯ ಸರ್ಕಾರ ಮರುನೇಮಕ ಮಾಡಿ ಆದೇಶ ಹೊರಡಿಸಿದೆ.
ನ.26ಕ್ಕೆ ಹೆಗ್ಡೆ ಅವರ ಅವಧಿ ಅಂತ್ಯವಾಗಲಿದೆ. ಅಧ್ಯಕ್ಷರ ಅವಧಿ ವಿಸ್ತರಣೆಗೆ ಅವಕಾಶವಿಲ್ಲದ ಕಾರಣ ಹಾಲಿ ಅಧ್ಯಕ್ಷರನ್ನೇ ಎರಡು ತಿಂಗಳ ಅವಧಿಗೆ ಅಂದರೆ 2024 ಜನವರಿ 31ರವರೆಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಅವರನ್ನು ಮರುನೇಮಕಗೊಳಿಸಿದೆ.
ಶಿವಮೊಗ್ಗ ಜಿಲ್ಲೆಯ ಕಲ್ಯಾಣಕುಮಾರ್ ಎಚ್.ಎಸ್., ಬೆಂಗಳೂರಿನ ವಕೀಲ ಬಿ.ಎಸ್.ರಾಜಶೇಖರ್, ಉಡುಪಿಯ ಅರುಣ್ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೆ.ಟಿ.ಸುವರ್ಣ, ಬೆಂಗಳೂರಿನ ಶಾರದಾ ನಾಯ್ಕ್ ಅವರುಗಳನ್ನು ಸದಸ್ಯರನ್ನಾಗಿ ನೇಮಿಸಿ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಅವರು ಜಾತಿ ಗಣತಿ ವರದಿ ಸಿದ್ಧಪಡಿಸಿದ್ದರು. ಆದರೆ, ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಮಾಡಿರಲಿಲ್ಲ. ಹೀಗಾಗಿ ವರದಿಗೆ ಆಧಾರವಾದ ದತ್ತಾಂಶ ಆಧರಿಸಿ ಆಯೋಗವು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಉದ್ದೇಶಿಸಿದೆ. ಡಿಸೆಂಬರ್‌ನಲ್ಲಿ ವರದಿ ಸಲ್ಲಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಜಾತಿ ಗಣತಿ ವರದಿ ಚರ್ಚೆ ಬೆನ್ನಲ್ಲೇ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮರುನೇಮಕಾತಿ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಂಬಳ | ನವೆಂಬರ್ 25, 26 ರಂದು ಸಂಚಾರ ಮಾರ್ಗ ಬದಲಾವಣೆ; ಇಲ್ಲಿದೆ ಮಾಹಿತಿ
ಸಿಎಂಗೆ ಪತ್ರ ಬರೆದಿದ್ದ ಹೆಗ್ಡೆ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅವಧಿಯು 2023ರ ನವೆಂಬರ್ 26ರಂದು ಮುಕ್ತಾಯಗೊಳ್ಳಲಿದೆ. ಪ್ರಸ್ತುತ ಆಯೋಗವು 2015ರ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿದೆ. ಈ ವರದಿಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಲು ಕಾಲಾವಕಾಶ ಬೇಕಿದ್ದು, ಪ್ರಸ್ತುತ ಆಯೋಗವನ್ನು ಮುಂದುವರಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನ.22ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.